ರಾಜಕೀಯ

ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ? ಆಲ್ ದಿ ಬೆಸ್ಟ್ ಹೇಳಿದ ಡಿಕೆಶಿ

Lingaraj Badiger

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದ್ದು, ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ 'ಆಲ್ ದಿ ಬೆಸ್ಟ್', 'ಗುಡ್ ಲಕ್' ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಅವರು ಇಂದು ಸಂಜೆ ದೆಹಲಿಗೆ ತೆರಳಬೇಕಿತ್ತು. ಸಂಜೆ 7-30ಕ್ಕೆ ದೆಹಲಿಗೆ ತೆರಳಲು ಏರ್ ಇಂಡಿಯಾ ವಿಮಾನದ ಟಿಕೆಟ್ ಸಹ ಬುಕ್ ಮಾಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರ ದೆಹಲಿ ಭೇಟಿ ರದ್ದಾಗಿದೆ.

ಬಳಿಕ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಎನ್ ಡಿಟಿವಿಯೊಂದಿಗೆ ಮಾತನಾಡಿದ ಡಿಕೆಶಿ, ಅನಾರೋಗ್ಯದ ಕಾರಣದಿಂದ ದೆಹಲಿ ಪ್ರವಾಸ ರದ್ದುಗೊಳಿಸಿದ್ದೇನೆ. ಚೆಂಡು ಈಗ ಕೇಂದ್ರ ನಾಯಕರ ಅಂಗಳದಲ್ಲಿದೆ ಮತ್ತು ಅವರು ಕಾಂಗ್ರೆಸ್ "ಗೆಲುವಿನ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು" ಎಂದಿದ್ದಾರೆ.

ನನ್ನ ಮೇಲೆ ನಂಬಿಕೆ ಇದೆ ಎಂದು ಈ ಹಿಂದೆ ಸೋನಿಯಾ ಗಾಂಧಿ ಅವರು ಹೇಳಿದ್ದರು. ನಾನು ಇಲ್ಲಿ ಕುಳಿತು ನನ್ನ ಕೆಲಸ ಮಾಡುತ್ತಿದ್ದೇನೆ. ನಿಮಗೆ ಸಾಮಾನ್ಯ ಕೃತಜ್ಞತೆ ಮತ್ತು ಸೌಜನ್ಯ ಇರಬೇಕು. ಗೆಲುವಿನ ಹಿಂದೆ ಯಾರಿದ್ದಾರೆ ಎಂದು ಒಪ್ಪಿಕೊಳ್ಳುವ ಸೌಜನ್ಯ ಇರಬೇಕು ಎಂದು ಡಿಕೆಶಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಸಂಖ್ಯಾಬಲ ಇದೆ. ಅವರಿಗೆ ಶುಭ ಕೋರುತ್ತೇನೆ. ನಾನು ರೆಬೆಲ್ ಅಲ್ಲ ಮತ್ತು ಬ್ಲಾಕ್ ಮೇಲ್ ಮಾಡುವುದಿಲ್ಲ. ನಾನು ಅಪ್ರಬುದ್ಧ ಅಲ್ಲ. ನನಗೆ ದೂರದೃಷ್ಟಿ ಇದೆ. ನಾನು ಪಕ್ಷಕ್ಕೆ ನಿಷ್ಠನಾಗಿರುತ್ತೇನೆ. ನಾನು ಷಡ್ಯಂತ್ರಕ್ಕೆ ಬಲಿಯಾಗುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT