ರಾಜಕೀಯ

ಸುಳ್ಳೇ ಕುಮಾರಸ್ವಾಮಿ ಮನೆ ದೇವರು, ಹೊಟ್ಟೆಕಿಚ್ಚಿನಿಂದ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Sumana Upadhyaya

ಮೈಸೂರು: ತಮ್ಮ ಪುತ್ರ ಡಾ ಯತೀಂದ್ರ ಮೊಬೈಲ್ ನಲ್ಲಿ ಮಾತನಾಡಿರುವ ವಿಡಿಯೊ ರಾಜಕೀಯ ವಲಯದಲ್ಲಿ ವಿಪಕ್ಷ ನಾಯಕರ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ಶುಕ್ರವಾರ ತವರು ಜಿಲ್ಲೆ ಮೈಸೂರಿಗೆ ಭೇಟಿ ನೀಡಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರು ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಕನಕ ವಿದ್ಯಾರ್ಥಿ ನಿಲಯ, ಕಡಲೆ ಮಾರಮ್ಮ ದೇವಸ್ಥಾನ ಉದ್ಘಾಟನೆ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ಸುದ್ದಿಗಾರರು ಯತೀಂದ್ರ ವಿಡಿಯೊ ವೈರಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಮಗೆ ರಾಜಕೀಯದಲ್ಲಿ ದ್ವೇಷ ಗೊತ್ತಿಲ್ಲ. ನಾವು ಯಾರಾದರೂ ತಪ್ಪು ಮಾಡಿದ್ದರೆ ಅದನ್ನು ಒಪ್ಪುವುದಿಲ್ಲ. ಹಾಗಂತ ನಾವು ದ್ವೇಷದ ರಾಜಕೀಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದರು.

ಸುಳ್ಳು ಹೇಳುವುದು ಕುಮಾರಸ್ವಾಮಿ ಮನೆ ದೇವರು. ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ ದ್ವೇಷದಿಂದ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಹೇಳುವುದೆಲ್ಲ ಸುಳ್ಳು. ಕುಮಾರಸ್ವಾಮಿ ಇವತ್ತಿನವರೆಗೆ ಯಾವುದಾದರೂ ಸತ್ಯ ಹೇಳಿದ್ದರೆ ತೋರಿಸಿ. ಒಂದೇ ಒಂದು ವಿಚಾರದಲ್ಲಿ ಸತ್ಯ ಹೇಳಿದ್ದಾರಾ ಹೇಳಿ. ಕುಮಾರಸ್ವಾಮಿದು ಬರೀ ಹಿಟ್ ಅಂಡ್ ರನ್ ಕೇಸು ಎಂದರು. 

ಕುಮಾರಸ್ವಾಮಿ ಸುಳ್ಳು ಸುದ್ದಿ ಹಬ್ಬಿಸಿದರು: ನಮ್ಮ ಮಗನ ವಿಚಾರದಲ್ಲಿ ನಿನ್ನೆ ಸುಮ್ಮನೆ ಸುಳ್ಳು ಹಬ್ಬಿಸಿದರು. ನನ್ನ ಮಗ ನನಗಾಗಿ ಕ್ಷೇತ್ರ ಬಿಟ್ಟು ಕೊಟ್ಟಿದ್ದಾನೆ. ಈಗ ನನ್ನ ಪರವಾಗಿ ಕ್ಷೇತ್ರದಲ್ಲಿ ಜನರ ಕೆಲಸ ಮಾಡುತ್ತಿದ್ದಾನೆ. ಜನರ ಕೆಲಸ ಮಾಡುವುದು ತಪ್ಪಾ. ಕೆಡಿಪಿ ಸದಸ್ಯನಾಗಿರುವ ಕಾರಣ ಕೆಲವು ವಿಚಾರಗಳ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾನೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿದರೆ ಹೇಗೆ ಹೇಳಿ ಎಂದು ಪ್ರಶ್ನಿಸಿದರು. 

SCROLL FOR NEXT