ರಾಜಕೀಯ

ನಿಗಮ ಮಂಡಳಿಗೆ ಶಾಸಕರು, ಕಾಂಗ್ರೆಸ್ ಕಾರ್ಯಕರ್ತರ ನೇಮಕ: ಡಿಸಿಎಂ ಡಿಕೆಶಿ

Lingaraj Badiger

ಬೆಂಗಳೂರು: ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ. 

ಇಂದು ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನಿಗಮ ಮಂಡಳಿ ಅಧ್ಯಕ್ಷ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಪಕ್ಷದ ಸುಮಾರು 15-20 ಶಾಸಕರಿಗೆ ಅವಕಾಶ ಕಲ್ಪಿಸಿಕೊಟ್ಟು, ಉಳಿದ ಹುದ್ದೆಗಳನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೀಡಲಾಗುವುದು ಎಂದಿದ್ದಾರೆ.

ವಿವಿಧ ನಿಗಮ ಮಂಡಳಿಗಳ ನೇಮಕಾತಿ ವಿಳಂಬವಾಗುತ್ತಿರುವ ಬಗ್ಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿರುವ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ‘ನಾವು ಅದನ್ನು ಮಾಡುತ್ತೇವೆ, ಚಿಂತಿಸಬೇಡಿ’ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ತಿಳಿಸಿದ್ದಾರೆ.

ಶಾಸಕರಿಗೆ ಅವಕಾಶ ನೀಡುತ್ತೀರಾ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡುತ್ತೀರಾ ಎಂಬ ಪ್ರಶ್ನೆಗೆ, ‘ಶಾಸಕರೂ ನಮ್ಮ ನಾಯಕರು. ನಾನು ಮಂತ್ರಿಯಾದರೂ ಅವರಿಗೆ ಯಾವುದೇ ಸ್ಥಾನಮಾನ ಸಿಗದಿರುವುದು ತಪ್ಪಲ್ಲವೇ? ಅವರಿಗೂ ಅವಕಾಶ ನೀಡಬೇಕು, ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎಂದರು.

ಎಲ್ಲಾ ಶಾಸಕರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳುತ್ತಿಲ್ಲ. 20- 25 ಜನ ಕೇಳುತ್ತಿದ್ದಾರೆ. ಅದರಲ್ಲಿ 15 ಜನರಿಗೆ ಅವಕಾಶ ನೀಡುತ್ತೇವೆ. ಮಿಕ್ಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಿದ್ದು, ಅವರಿಗೆ ಎರಡುವರೆ ವರ್ಷ ಅವಕಾಶ ನೀಡುತ್ತೇವೆ. ನಮ್ಮ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಾಗೂ ಅವಕಾಶ ಕೊಡುತ್ತೇವೆ ಎಂದರು.

SCROLL FOR NEXT