ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿ ಎನ್ನುವವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚನೆ ಎಸಗಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಅವರನ್ನು ಬೆಂಬಲಿಸುವ ಹಾಗೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗ ಮಾತನಾಡಿದ ಅವರು, ನೂರಾರು ಜನರು ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಾರೆ. ಚೈತ್ರ ಕೂಡ ನನ್ನ ಜೊತೆ ಫೋಟೊ ತೆಗೆಸಿಕೊಂಡಿರಬಹುದು. ಸಾರ್ವಜನಿಕ ಕಾರ್ಯಕ್ರಮ ಸಮಯದಲ್ಲಿ ಫೋಟೋ ತೆಗೆದುಕೊಂಡಿರಬಹುದು. ಚೈತ್ರಾ ಜೊತೆಗೆ ನನ್ನ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಬರುತ್ತೆ; ದೊಡ್ಡ ದೊಡ್ಡವರ ಹೆಸರೂ ಹೊರಗೆ ಬರತ್ತೆ: ಚೈತ್ರಾ ಕುಂದಾಪುರ
ನಾವು ಯಾರೂ ಚೈತ್ರಾ ಅವರನ್ನು ಬೆಂಬಲಿಸಿಲ್ಲ ಅಥವಾ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿಲ್ಲ. ಬಿಜೆಪಿಯಲ್ಲಿ ಪಕ್ಷದ ಟಿಕೆಟ್‌ಗಳನ್ನು ಅಭ್ಯರ್ಥಿಗಳಿಗೆ ಮಾರಲಾಗುವುದಿಲ್ಲ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು. ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರ ಹೆಸರನ್ನು ದುರುಪಯೋಗ ಮಾಡಿಕೊಂಡವರಿಗೆ ಹಾಗೂ ವಂಚನೆ ಮಾಡಿದವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿ ಟಿಕೆಟ್ ಕುರಿತು ಪಕ್ಷದ ಹೈಕಮಾಂಡ್ ಮಾತ್ರ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. “ಪಕ್ಷದ ಟಿಕೆಟ್‌ಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಜೆಪಿಗೆ ಪ್ರಬಲ ನಾಯಕತ್ವವಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.