ರಾಜಕೀಯ

ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ: ಇದು ಸಾರಾಯಿ ಗ್ಯಾರಂಟಿ ಸರ್ಕಾರ ಎಂದು ಬಸವರಾಜ ಬೊಮ್ಮಾಯಿ ಕಿಡಿ

Ramyashree GN

ಬೆಂಗಳೂರು: ಸದ್ಯ ರಾಜ್ಯದಲ್ಲಿ ಬರಗಾಲವಿದ್ದು, ನೀರು ಕೊಡಲು ವಿಫಲವಾಗಿದ್ದರೂ ಎಲ್ಲೆಂದರಲ್ಲಿ ಮದ್ಯ ಸಿಗುವಂತೆ ಸಿದ್ಧತೆ ನಡೆಸುತ್ತಿರುವ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ 'ಸಾರಾಯಿ ಗ್ಯಾರಂಟಿ ಸರ್ಕಾರ' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.

ಈ ಸುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಒಂದೆಡೆ ಗ್ಯಾರೆಂಟಿ ಹೆಸರಲ್ಲಿ ಮಹಿಳೆಯರಿಗೆ 2000 ರೂ. ನೀಡುವುದಾಗಿ ಹೇಳುವ ಸರ್ಕಾರ ಅದೇ ಹಣವನ್ನು ಅವರ ಗಂಡಂದಿರಿಂದ ವಸೂಲಿ ಮಾಡಲು ಮದ್ಯ ಮಾರಾಟದ ಮಾರ್ಗ ಹುಡುಕಿಕೊಂಡಂತಿದೆ ಎಂದಿದ್ದಾರೆ. 

ಹೆಂಡತಿಯ ದುಡ್ಡು ಗಂಡಂದಿರಿಂದ ಪಡೆಯುವ ಮನಿ ರಿಟರ್ನ್ ಪಾಲಿಸಿ ಹಾಕಿಕೊಂಡ ಹಾಗಿದೆ. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರಿ ಮದ್ಯದಂಗಡಿ ತೆರೆಯುತ್ತಿರುವುದಾಗಿ ಅಬಕಾರಿ ಸಚಿವರು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಕ್ರಮ ತಡೆಯಲಾಗದಿದ್ದರೆ ನಿಮ್ಮ ಇಲಾಖೆ ಮಾಡುವುದಾದರೂ ಏನು? ಎಂದು ಪ್ರಶ್ನಿಸಿದ್ದಾರೆ. 

ಮುಂದುವರಿದು, ಗ್ಯಾರಂಟಿ ಯೋಜನೆಯಲ್ಲಿ ಮನೆ ಯಜಮಾನಿ ಹುಡುಕುವ ಹೆಸರಲ್ಲಿ ಅತ್ತೆ-ಸೊಸೆ ನಡುವೆ ಜಗಳ ಹಚ್ಚಿರುವ ಸರ್ಕಾರ, ಇನ್ನು ಸಾರಾಯಿ ಕುಡಿಯಲು ಹಣಕ್ಕಾಗಿ ಗಂಡ ಹೆಂಡತಿ ನಡುವೆ ಜಗಳ ಹಚ್ಚಲು ಮುಂದಾಗಿದೆ. ಸರ್ಕಾರ ಆದಾಯ ಗಳಿಸಲು ಮದ್ಯ ಮಾರಾಟದ ಮೊರೆ ಹೋದರೆ, ಸರ್ಕಾರದ ಗ್ಯಾರಂಟಿ ಪಡೆಯುವ ಮಹಿಳೆಯರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರಂಟಿ ಸರ್ಕಾರ ಎಂದು ದೂರಿದರು.

SCROLL FOR NEXT