ಯದುವೀರ್ ಒಡೆಯರ್ ರೋಡ್ ಶೋ
ಯದುವೀರ್ ಒಡೆಯರ್ ರೋಡ್ ಶೋ 
ರಾಜಕೀಯ

ಲೋಕಸಭಾ ಚುನಾವಣೆ 2024: ಯದುವೀರ್‌ ಒಡೆಯರ್ ಅವಿರೋಧವಾಗಿ ಆಯ್ಕೆಯಾಗಲಿ- ಎಚ್.ವಿಶ್ವನಾಥ್

Srinivasamurthy VN

ಮೈಸೂರು: ಅಚ್ಚರಿ ಬೆಳವಣಿಗೆಯೊಂದರಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿರುವ ವಿಧಾನಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಅವರು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಗೆ ಬೆಂಬಲ ಸೂಚಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಬುಧವಾರ ಮೈಸೂರಿನ ಎಚ್ ವಿಶ್ವನಾಥ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು.

ಈ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ವಿಶ್ವನಾಥ್, ‘ರಾಜಪ್ರಭುತ್ವದ ಕುಡಿ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಲು ಸ್ಪರ್ಧಿಸಿದ್ದಾರೆ. ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿದೆ. ಕಾಂಗ್ರೆಸ್‌ಗೆ ಇನ್ನೂ ಕಾಲ ಮಿಂಚಿಲ್ಲ. ಅನ್ನ, ಅಕ್ಷರ, ಆರೋಗ್ಯ ಕೊಟ್ಟ ಯದುವಂಶಕ್ಕೆ ಗೌರವ ಕೊಟ್ಟು ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು. ಮೈಸೂರಿನ ಅರಸರು ಜಾತಿ ಮುಂದಿಟ್ಟುಕೊಂಡು ಅಭಿವೃದ್ಧಿ ಮಾಡಿಲ್ಲ. ಯದುವಂಶದವರು ಜಾತಿ ಮೀರಿದವರು ಎಂದರು.

ಅಂತೆಯೇ ‘ನಾನು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೇಳಿದ್ದು ಸತ್ಯ. ವಿಷಯಾಧಾರಿತವಾಗಿ ಬಿಜೆಪಿ ಟೀಕಿಸಿದ್ದೂ ಸತ್ಯ. ಆದರೆ, ಯದುವೀರ್‌ ಸ್ಪರ್ಧಿಸಿದ್ದರಿಂದ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದೇನೆ. ಅವರು ಯಾವುದೇ ಪಕ್ಷದಿಂದ ಕಣಕ್ಕಿಳಿದಿದ್ದರೂ ಅವರ ವಿರುದ್ಧ ಸ್ಪರ್ಧಿಸದಿರುವ ತೀರ್ಮಾನ ಮಾಡುತ್ತಿದ್ದೆ’ ಎಂದರು.

ಅಂದಹಾಗೆ ವಿಶ್ವನಾಥ್ ಕಳೆದ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕಾಂಗ್ರೆಸ್ ಪಾಳೆಯದಲ್ಲಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲವಾದರೂ ಅವರ ಒಡನಾಟವೆಲ್ಲ ಕಾಂಗ್ರೆಸ್ ನಾಯಕರೊಂದಿಗಿದೆ. ಬಿಜೆಪಿ ನಾಯಕರನ್ನು ಅವರು ಒಂದೇ ಸಮ ಟೀಕಿಸುತ್ತಿರುತ್ತಾರೆ.

SCROLL FOR NEXT