ಅಮಿತ್ ಶಾ
ಅಮಿತ್ ಶಾ 
ರಾಜಕೀಯ

ಅಮಿತ್ ಶಾ ಎಚ್ಚರಿಕೆ ಬೆನ್ನಲ್ಲೇ ತೆರೆಮರೆಗೆ ಸರಿದ ಬಂಡಾಯ: ಬಿಜೆಪಿಯಲ್ಲಿ ಅಸಮಾಧಾನಿತರ ಒಗ್ಗಟ್ಟಿನ ಮಂತ್ರ!

Shilpa D

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡಿದ ಒಂದು ದಿನದ ನಂತರ, ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಹೆಡೆ ಎತ್ತಿದ್ದ ಬಂಡಾಯ ಬಹುತೇಕ ತಣ್ಣಗಾಗಿದೆ.

ಪ್ರತಿಷ್ಠೆ ಬದಿಗಿಟ್ಟು ಪಕ್ಷಕ್ಕಾಗಿ ದುಡಿಯುವಂತೆ ನಾಯಕರಿಗೆ ಅಮಿತ್ ಶಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಬಗೆಹರಿದಿದೆ. ಈ ಬಾರಿ 25 ಸ್ಥಾನಗಳಲ್ಲಿ ಬಿಜೆಪಿ ಶೇ. 60 ರಷ್ಟು ಹಾಲಿ ಸಂಸದರಿಗೆ ಟಿಕೆಟ್ ನೀಡಿಲ್ಲ ಮತ್ತು ಹೊಸ ಮುಖಗಳನ್ನು ಕಣಕ್ಕಿಳಿಸಿದೆ. ಇದರಿಂದ ಟಿಕೆಟ್ ಕೈ ತಪ್ಪಿದ ಹಾಲಿ ಸಂಸದರು ಹಾಗೂ ಇತರ ಮುಖಂಡರ ನಡುವೆ ವಾಗ್ವಾದ ಉಂಟಾಗಿತ್ತು. ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಮುಖಂಡರು ಪ್ರಚಾರದಿಂದ ದೂರ ಉಳಿದಿದ್ದು, ಪಕ್ಷದ ಅಭ್ಯರ್ಥಿಗಳಿಗೆ ತೀವ್ರ ಮುಜುಗರ ಉಂಟು ಮಾಡಿತ್ತು.

ಚಿತ್ರದುರ್ಗದಿಂದ ಸ್ಪರ್ಧಿಸಲು ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಹೆಸರು ಘೋಷಣೆಯಾದ ಬೆನ್ನಲ್ಲೇ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಬೆಂಬಲಿಗರ ಸಭೆ ನಡೆಸಿ ಮಗನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು. ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ತಮ್ಮ ಪುತ್ರ ನಾಮಪತ್ರ ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಶಾ ಅವರ ಭೇಟಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಧ್ಯಪ್ರವೇಶದ ನಂತರ ಚಂದ್ರಪ್ಪ ಅವರು ಚಿತ್ರದುರ್ಗದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಪರ ಪ್ರಚಾರ ನಡೆಸುತ್ತಿರುವುದು ಕಂಡುಬಂದಿದೆ.

ಚಿಕ್ಕಬಳ್ಳಾಪುರದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಾ. ಕೆ.ಸುಧಾಕರ್ ಪಕ್ಷದ ಮುಖಂಡರ ಸೂಚನೆ ಮೇರೆಗೆ ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ಅವರನ್ನು ಭೇಟಿ ಮಾಡಿದರು.

ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಮಗನಿಗೆ ಟಿಕೆಟ್ ಸಿಗದಿದ್ದಕ್ಕೆ ವಿಶ್ವನಾಥ್ ಅಸಮಾಧಾನಗೊಂಡಿದ್ದರು. ಕೆಲ ದಿನಗಳ ಹಿಂದೆ ಕೊಪ್ಪಳ ಸಂಸದ ಕರಡಿ ಸಂಗಣ್ಣನವರ ಹಿಂಬಾಲಕರು ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಕಚೇರಿ ಧ್ವಂಸ ಮಾಡುವವರೆಗೂ ಹೋಗಿತ್ತು ಇದೀಗ ಸಮಸ್ಯೆ ಬಗೆಹರಿದಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಸಂಗಣ್ಣ ಮತ್ತು ಅವರ ಅನುಯಾಯಿಗಳು ತಮ್ಮ ಪಕ್ಷದ ಅಭ್ಯರ್ಥಿ ಡಾ. ಕೆ.ಬಸವರಾಜ್ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ದಾವಣಗೆರೆಯ ಕೆಲವು ಮುಖಂಡರನ್ನು ಭೇಟಿ ಮಾಡಿ ಪಕ್ಷದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರನ್ನು ಬೆಂಬಲಿಸುವಂತೆ ಮನವರಿಕೆ ಮಾಡಿದ್ದರು. ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೂಡ ರೊಚ್ಚಿಗೆದ್ದಿದ್ದು, ಇದೀಗ ತಮ್ಮ ನಿಲುವು ಬದಲಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ.

SCROLL FOR NEXT