ಯದುವೀರ್ ಒಡೆಯರ್ ರೋಡ್ ಶೋ
ಯದುವೀರ್ ಒಡೆಯರ್ ರೋಡ್ ಶೋ 
ರಾಜಕೀಯ

ಕೊಡಗು: ಮಡಿಕೇರಿಯಲ್ಲಿ ಯದುವೀರ್ ಒಡೆಯರ್ ಅದ್ದೂರಿ ರೋಡ್ ಶೋ!

Nagaraja AB

ಮಡಿಕೇರಿ: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಮೈಸೂರು-ಕೊಡಗು ಎನ್ ಡಿಎ ಅಭ್ಯರ್ಥಿ ಯದುವೀರ್ ಒಡೆಯರ್ ಭರ್ಜರಿ ರೋಡ್ ಶೋ ನಡೆಸಿದರು. ಕೊನೆಯ ದಿನದ ಚುನಾವಣಾ ರ್‍ಯಾಲಿಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಯದುವೀರ್ ಅವರ ಮೇಲೆ ಪುಷ್ಪವೃಷ್ಟಿ ಮಾಡಿದ ನಂತರ ಸಾಂಪ್ರದಾಯಿಕ 'ಚಂಡೆ' ಪ್ರದರ್ಶನದೊಂದಿಗೆ ರೋಡ್ ಶೋ ಪ್ರಾರಂಭವಾಯಿತು. ವಿರಾಜಪೇಟೆಯ ದಕ್ಷಿಣ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಪಟ್ಟಣದಾದ್ಯಂತ ರೋಡ್ ಶೋ ಮುಂದುವರೆಯಿತು.

ಇದೇ ವೇಳೆ ಮಾಜಿ ಒಲಿಂಪಿಯನ್ ಕೂತಂಡ ಪೂಣಚ್ಚ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಸಭೆಯನ್ನುದ್ದೇಶಿಸಿ ಮಾತನಾಡಿದ ಯದುವೀರ್, ''ಕೊಡಗು ಕೊಡಗು ಆಗಿಯೇ ಉಳಿಯಬೇಕು, ಕೇಂದ್ರ ಸರಕಾರದ ಜನಪರ ಯೋಜನೆಗಳು ಮತ್ತು ಅಭಿವೃದ್ಧಿ ಹೊಂದಿದ ಭಾರತ ಪರಿಕಲ್ಪನೆಯು ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಭಾರತ ಕಲ್ಪನೆಯು ಜಾಗತಿಕವಾಗಿ ಖ್ಯಾತಿ ಪಡೆದಿದೆ ಎಂದರು.

ಸುಸ್ಥಿರ ಆರ್ಥಿಕತೆ ನಿರ್ಮಾಣ, ಡಿಜಿಟಲ್ ಇಂಡಿಯಾ, ರಕ್ಷಣಾ ವಲಯದಲ್ಲಿ ಸ್ವಾವಲಂಬನೆ, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ, ಸ್ವದೇಶಿ ಉತ್ಪನ್ನಗಳ ಮಾರುಕಟ್ಟೆ, ಮೇಕ್ ಇನ್ ಇಂಡಿಯಾ ಇತ್ಯಾದಿಗಳ ಮೂಲಕ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಮತದಾರರು 'ಕಮಲ' ಬಟನ್ ಒತ್ತಿ, ಮೋದಿಯನ್ನು ಪುನಃ ಆಯ್ಕೆ ಮಾಡಿರಿ ಎಂದು ಮನವಿ ಮಾಡಿದರು.

ಈ ನಡುವೆ ನಟಿ ತಾರಾ ರೋಡ್ ಶೋ ವೇಳೆಯಲ್ಲಿ ಯದುವೀರ್ ಪರ ಪ್ರಚಾರ ಮಾಡಿದರು. ವಿರಾಜಪೇಟೆಯಿಂದ ಮಡಿಕೇರಿಗೆ ರೋಡ್ ಶೋ ಸ್ಥಳಾಂತರವಾದಾಗ ಮಾತನಾಡಿದ ಯದುವೀರ್, ಈ ಬಾರಿಯ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. 'ಉತ್ತಮ ಭವಿಷ್ಯಕ್ಕಾಗಿ' ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಜನರಲ್ಲಿ ಮನವಿ ಮಾಡಿದರು

SCROLL FOR NEXT