ವಿಜಯಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ 
ರಾಜಕೀಯ

I.N.D.I.A ಮೈತ್ರಿಕೂಟ ಅಧಿಕಾರಕ್ಕೆ ಬಂದ ಮೇಲೆ ದೇಶದ 20-25 ಶ್ರೀಮಂತರ ಸಂಪತ್ತು ಬಡವರಿಗೆ ಹಂಚಿಕೆ: ರಾಹುಲ್ ಗಾಂಧಿ

I.N.D.I.A ಮೈತ್ರಿಯು ರಾಷ್ಟ್ರದ ಸಂಪತ್ತನ್ನು ಮೋದಿ ಸರ್ಕಾರದಿಂದ ವಂಚಿತರಾದ ನಿರ್ಗತಿಕರಿಗೆ ಮರುಹಂಚಿಕೆ ಮಾಡುತ್ತದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

ವಿಜಯಪುರ: ದೇಶದ ಶೇಕಡಾ 20ರಿಂದ 25 ಜನರಿಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ರಾಷ್ಟ್ರದ ಸಂಪತ್ತನ್ನು ಮೋದಿ ಸರ್ಕಾರ ಹಂಚುತ್ತಿದ್ದು, ಇಂಡಿಯಾ ಬ್ಲಾಕ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಬಡವರು, ರೈತರು ಮತ್ತು ಮಹಿಳೆಯರಿಗೆ ಸಮಾನ ಪ್ರಮಾಣದಲ್ಲಿ ರಾಷ್ಟ್ರದ ಸಂಪತ್ತನ್ನು ಹಂಚಿಕೆ ಮಾಡಲಾಗುವುದು. ದೇಶದ ವಿವಿಧ ಕಲ್ಯಾಣ ಯೋಜನೆಗಳಿಗೆ ಸಂಪತ್ತನ್ನು ವಿನಿಯೋಗಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ವಿಜಯಪುರದಲ್ಲಿ ಇಂದು ಅವರು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ದೇಶದ 70 ಕೋಟಿಗೂ ಅಧಿಕ ಜನರ ಬಳಿ ಇರುವ ಸಂಪತ್ತಿಗೆ ಸಮನಾದ ಸಂಪತ್ತು ದೇಶದ ಶೇ.1ರಷ್ಟು ಜನರಲ್ಲಿ ಮಾತ್ರ ಇದೆ. ಕಳೆದ ಹತ್ತು ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ನಡೆದ ವಿದ್ಯಾಮಾನವಾಗಿದೆ. ಶ್ರೀಮಂತ ಜನರ ಒಂದು ಸಣ್ಣ ಭಾಗವು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಮೋದಿ ಸರ್ಕಾರವು ಸಾರ್ವಜನಿಕ ವಲಯದ ಘಟಕಗಳು, ಬಂದರುಗಳು, ವಿಮಾನ ನಿಲ್ದಾಣಗಳನ್ನು,ಅದಾನಿಯಂತಹ ಕೆಲವು ಉದ್ಯಮಿಗಳ ಇತರ ರಾಷ್ಟ್ರೀಯ ಸಂಪನ್ಮೂಲಗಳನ್ನು ಹಸ್ತಾಂತರಿಸಿದೆ” ಎಂದು ಆರೋಪಿಸಿದರು.

I.N.D.I.A ಮೈತ್ರಿಯು ರಾಷ್ಟ್ರದ ಸಂಪತ್ತನ್ನು ಮೋದಿ ಸರ್ಕಾರದಿಂದ ವಂಚಿತರಾದ ನಿರ್ಗತಿಕರಿಗೆ ಮರುಹಂಚಿಕೆ ಮಾಡುತ್ತದೆ ಎಂದು ನಾನು ಈ ಸಂದರ್ಭದಲ್ಲಿ ಭರವಸೆ ನೀಡುತ್ತೇನೆ ಎಂದರು.

ಕೇಂದ್ರ ಸರ್ಕಾರದ ‘ಅಗ್ನಿವೀರ್’ ನೀತಿಯು ದೇಶದ ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಯೋಜನೆ ಎಂದು ಬಣ್ಣಿಸಿದ ರಾಹುಲ್, ಜವಾನರಿಗೆ ಸಮಾನ ವೇತನ, ಸಮಾನ ಪಿಂಚಣಿ ಮತ್ತು ಸಮಾನ ಪಡಿತರ ಸೌಲಭ್ಯವನ್ನು ನೀಡುವ ಅಗ್ನಿವೀರ್ ನೀತಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.

ಜಿಎಸ್‌ಟಿ ಪದ್ಧತಿಗೆ ತಿದ್ದುಪಡಿ ತರುವ ಭರವಸೆ: ಜಿಎಸ್‌ಟಿ ಆಡಳಿತವನ್ನು ಸಂಪೂರ್ಣ ಅವೈಜ್ಞಾನಿಕ ಮತ್ತು ವ್ಯಾಪಾರ-ವಿರೋಧಿ ಎಂದು ಕರೆದ ರಾಹುಲ್ ಗಾಂಧಿ, ಇಂಡಿಯಾ ಒಕ್ಕೂಟವು ಜಿಎಸ್‌ಟಿ ಆಡಳಿತದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದು ಅದನ್ನು ವ್ಯಾಪಾರಿ ಸ್ನೇಹಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು.

ಇಂದು, ದೋಷಪೂರಿತ ಜಿಎಸ್‌ಟಿ ವ್ಯವಸ್ಥೆಯಿಂದಾಗಿ, ಕರ್ನಾಟಕವು ಕೇಂದ್ರಕ್ಕೆ 100 ರೂಗಳನ್ನು ನೀಡುತ್ತದೆ, ಆದರೆ ಅದಕ್ಕೆ ಪ್ರತಿಯಾಗಿ ಕೇಂದ್ರದಿಂದ ಕೇವಲ 13 ರೂಪಾಯಿ ಸಿಗುತ್ತಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಸರ್ಕಾರ ಜಿಎಸ್‌ಟಿ ವ್ಯವಸ್ಥೆಗೆ ತಿದ್ದುಪಡಿ ತರಲಿದೆ ಎಂದರು.

MSP ಮೇಲೆ ಕಾನೂನು: ರೈತರಿಗೆ ಭರವಸೆಗಳನ್ನು ನೀಡಿದ ರಾಹುಲ್ ಗಾಂಧಿ, ತಮ್ಮ ಸರ್ಕಾರವು ರೈತರಿಗೆ ಸಹಾಯ ಮಾಡಲು MSP ಮೇಲಿನ ಕಾನೂನನ್ನು ಖಚಿತಪಡಿಸುವುದು ಮಾತ್ರವಲ್ಲದೆ ಕೃಷಿ ಸಾಲವನ್ನೂ ಮನ್ನಾ ಮಾಡುತ್ತದೆ ಎಂದು ಘೋಷಿಸಿದರು.

ಮಹಿಳೆಯರ ಆರ್ಥಿಕ ಸಬಲೀಕರಣ: ಮಹಿಳೆಯರಿಗೆ ಸಂಬಂಧಿಸಿದಂತೆ, ಇಂಡಿಯಾ ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದ ಪ್ರತಿ ಕುಟುಂಬದ ಬಡ ಮಹಿಳೆಯರನ್ನು ಗುರುತಿಸುತ್ತದೆ. ಪ್ರತಿ ಮಹಿಳೆಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೀಡುತ್ತದೆ. ಕರ್ನಾಟಕದಲ್ಲಿ ಇದು 1.24 ಲಕ್ಷ ಆಗಲಿದೆ, ಏಕೆಂದರೆ ರಾಜ್ಯವು ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ವರ್ಷ 24,000 ರೂಪಾಯಿ ನೀಡುತ್ತದೆ.

ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವ ಪ್ರಧಾನಿ ಮೋದಿ: ಈ ಬಾರಿಯ ಲೋಕಸಭಾ ಚುನಾವಣೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಂತಲ್ಲ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡುವ ಸಂಕಲ್ಪ ಹೊಂದಿರುವವರು ಮತ್ತು ಅದನ್ನು ಉಳಿಸಲು ಶ್ರಮಿಸುವವರನ್ನು ಜನರು ಆರಿಸಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದರು.

ಎಲ್ಲರಿಗೂ ಸಮಾನತೆಯನ್ನು ಖಾತರಿಪಡಿಸುವ, ಧ್ವನಿಯಿಲ್ಲದವರಿಗೆ ಧ್ವನಿ ನೀಡುವ ಮತ್ತು ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಎತ್ತಿಹಿಡಿಯುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತರಲು ನಾವು ಮುಂದಾಗಿದ್ದು, ಸಂವಿಧಾನವನ್ನು ನಾಶಮಾಡಲು ಪ್ರಧಾನಿ ಮೋದಿ ಮತ್ತು ಬಿಜೆಪಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ರ್ಯಾಲಿಗೆ ಜೊತೆಯಾದರು. ಸಚಿವರಾದ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಎಐಸಿಸಿ ಚುನಾವಣಾ ವೀಕ್ಷಕ ಸೈಯದ್ ಬುರ್ಹಾನುದ್ದೀನ್, ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT