ಬೆಂಗಳೂರು: ಯಾದಗಿರಿಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ ಅವರು ಬುಧವಾರ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದ ಯಾವುದೇ ಏಜೆನ್ಸಿಯಿಂದ ತನಿಖೆ ನಡೆದರೂ ಪ್ರಕರಣದಲ್ಲಿ ನ್ಯಾಯ ಸಿಗದಿರಬಹುದು ಎಂದು ಬಿಜೆಪಿ ನಾಯಕ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
"ಆಗಸ್ಟ್ 2 ರಂದು ಯಾದಗಿರಿ ಪಟ್ಟಣದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೃತ ಅಧಿಕಾರಿಯ ಪತ್ರಿ ಶ್ರೀಮತಿ ಶ್ವೇತಾ ಅವರು ತಮ್ಮ ಪತಿ ಸಾವಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರ ಕಾರಣ ಆರೋಪಿಸಿದ್ದಾರೆ.
ಸಿಐಡಿ ತಂಡವು ಯಾದಗಿರಿಗೆ ಭೇಟಿ ನೀಡಿ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಮತ್ತು ಅವರ ಪುತ್ರನ ವಿರುದ್ಧ ಬಿಎನ್‌ಎಸ್(ಭಾರತೀಯ ನ್ಯಾಯ ಸಂಹಿತೆ) ಮತ್ತು ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ.
"ವಾಸ್ತವವೆಂದರೆ ಆರೋಪಿಗಳು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ ಮತ್ತು ಘಟನೆಯ ಕೆಲವು ದಿನಗಳ ನಂತರ ಮುಖ್ಯಮಂತ್ರಿಯ ಮನೆಯಲ್ಲಿ ಹಾಗೂ ಇತ್ತೀಚೆಗೆ ಗೃಹ ಸಚಿವರೊಂದಿಗೆ ಕಾಣಿಸಿಕೊಂಡಿದ್ದಾರೆ" ಎಂದು ಛಲವಾದಿ ಟಿ ನಾರಾಯಣಸ್ವಾಮಿ ಪತ್ರದಲ್ಲಿ ವಿವರಿಸಿದ್ದಾರೆ.
"ನಮ್ಮ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ, ನಿಮ್ಮ ವಿಶೇಷ ಅಧಿಕಾರ ಬಳಿಸಿ ಪ್ರಕರಣವನ್ನು ಸಿಬಿಐಗೆ ವಹಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ನಾನು ಈ ಮೂಲಕ ವಿನಂತಿಸುತ್ತೇನೆ. ರಾಜ್ಯ ಸರ್ಕಾರದಿಂದ ಯಾವುದೇ ಸಂಸ್ಥೆಯು ನ್ಯಾಯ ಒದಗಿಸದ ಕಾರಣ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲು ನಾವು ನಿಮ್ಮ ಸಹಾಯ ಕೋರುತ್ತೇವೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.