ಡಿ.ಕೆ ಶಿವಕುಮಾರ್ 
ರಾಜಕೀಯ

ಯತ್ನಾಳ್ ಮಾತ್ರವಲ್ಲ, ಇಡೀ ಬಿಜೆಪಿಯೇ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದೆ: ಡಿ.ಕೆ ಶಿವಕುಮಾರ್

ನಮ್ಮ ಸಂವಿಧಾನದ ಮೂಲ ಶಕ್ತಿ ಹಾಗೂ ಆಶಯವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಚಿಂತನೆಯನ್ನು ಮೊದಲು ಪ್ರತಿಪಾದಿಸಿದವರು ಬಸವಣ್ಣನವರು.

ಬೆಂಗಳೂರು: ಬಸವಣ್ಣನವರಿಗೆ ಬಸವನಗೌಡ ಪಾಟೀಲ್ ಯತ್ನಾಳ್ ಒಬ್ಬರೇ ಮಸಿ ಬಳಿದಿಲ್ಲ. ಇಡೀ ಬಿಜೆಪಿ ಪಕ್ಷವೇ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿದೆ. ಯತ್ನಾಳ್ ಇತಿಹಾಸವೇ ಬಿಜೆಪಿ ಇತಿಹಾಸ. ಹೀಗಾಗಿ ಅವರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಪ್ರಶ್ನೆಗಳಿಗೆ ಭಾನುವಾರ ಉತ್ತರಿಸಿದರು. ಯತ್ನಾಳ್ ಅವರಂತಹ ಮುತ್ತು ರತ್ನವನ್ನು ಬಿಜೆಪಿಯವರು ತಮ್ಮ ಬಳಿಯೇ ಇಟ್ಟುಕೊಳ್ಳಲಿ. ಇದು ಆ ಪಕ್ಷದ ಆಂತರಿಕ ವಿಚಾರ. ಅದಕ್ಕೆ ನಾವು ತಲೆ ಹಾಕುವುದಿಲ್ಲ. ಯತ್ನಾಳ್ ಹೇಳಿಕೆಯನ್ನು ಯಡಿಯೂರಪ್ಪ, ವಿಜಯೇಂದ್ರ, ಅಶೋಕ, ಕೇಂದ್ರ ಸಚಿವ ಸೋಮಣ್ಣ ಹಾಗೂ ಬೊಮ್ಮಾಯಿ ಅವರ್ಯಾರು ಖಂಡಿಸಿದ್ದಾರೆಯೇ? ಯಾರೂ ಸಹ ಖಂಡಿಸಿಲ್ಲ. ಇದು ಬಿಜೆಪಿ ಬಸವಣ್ಣನವರ ವಿರೋಧಿ ಎಂಬುದನ್ನು ನಿರೂಪಿಸುತ್ತದೆ" ಎಂದು ಹೇಳಿದರು. ಬಸವಣ್ಣನವರ ಬಗ್ಗೆ ಹುಚ್ಚರಂತೆ ಮಾತನಾಡಿರುವ ಯತ್ನಾಳ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಅನೇಕ ಮಠಾಧೀಶರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ" ಎಂದು ತಿಳಿಸಿದರು.

ಬಸವಣ್ಣನವರ ಚಿಂತನೆಯೇ ಕಾಂಗ್ರೆಸ್ ಪಕ್ಷದ ಚಿಂತನೆ. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾದಾಗ ಬಸವಣ್ಣನವರ ಜಯಂತಿಯಂದೇ ಪ್ರಮಾಣ ವಚನ ತೆಗೆದುಕೊಂಡರು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದ್ದು, ಬಸವಣ್ಣನವರ ಜಯಂತಿಗೆ ಶಕ್ತಿ ಕೊಟ್ಟಿದ್ದು, ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಯಾವ ಜನತಾದಳ, ಬಿಜೆಪಿ, ಜನಸಂಘವೂ ಈ ಕೆಲಸ ಮಾಡಿಲ್ಲ" ಎಂದರು. "ನಮ್ಮ ಸಂವಿಧಾನದ ಮೂಲ ಶಕ್ತಿ ಹಾಗೂ ಆಶಯವಾದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಚಿಂತನೆಯನ್ನು ಮೊದಲು ಪ್ರತಿಪಾದಿಸಿದವರು ಬಸವಣ್ಣನವರು. ನಮ್ಮ ಪಕ್ಷದ ಸಿದ್ಧಾಂತಕ್ಕೂ ಬಸವಣ್ಣನವರಿಗೂ ಅವಿನಾಭಾವ ಸಂಬಂಧವಿದೆ ಇದನ್ನು ನಾವು ಉಳಿಸಿ, ಬೆಳೆಸಿ, ರಕ್ಷಣೆ ಮಾಡಿಕೊಂಡು ಹೋಗುತ್ತೇವೆ" ಎಂದು ಹೇಳಿದರು.

ನಿಮ್ಮ ಹಾಗೂ ವಿಜಯೇಂದ್ರ ಅವರ ನಡುವಿನ ಸ್ನೇಹದ ಬಗ್ಗೆ ಹಾಗೂ ಅವರ ಪತ್ರಗಳಿಗೆ ಸಹಿ ಹಾಕಿರುವ ವಿಡಿಯೋಗಳಿದ್ದು, ಅವುಗಳನ್ನು ಬಹಿರಂಗ ಮಾಡುತ್ತೇನೆ ಎಂಬ ಯತ್ನಾಳ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ನಾನು ಈ ರಾಜ್ಯದ ಉಪಮುಖ್ಯಮಂತ್ರಿ. ಈ ಹಿಂದೆ ಯಡಿಯೂರಪ್ಪನವರು ಅವರ ಕ್ಷೇತ್ರದ ಕೆಲಸಗಳ ಕುರಿತು ಒಂದಷ್ಟು ಪತ್ರಗಳಿಗೆ ಸಹಿ ಹಾಕಿಸಿಕೊಂಡು ಹೋಗಿದ್ದರು" ಎಂದು ಹೇಳಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ನನ್ನ ಕ್ಷೇತ್ರದ ಕೆಲಸವನ್ನು ಮಾಡಿಕೊಡುವುದಾಗಿ ಸದನದಲ್ಲಿ ಮಾತು ಕೊಟ್ಟಿದ್ದರು. ಆದರೆ ಮಾಡಿಕೊಟ್ಟಿರಲಿಲ್ಲ. ಆದಕಾರಣ ನಾನೇ ಖುದ್ದಾಗಿ ಭೇಟಿ ಮಾಡಿದ್ದೆ. ನಾನು ಅವರ ಕ್ಷೇತ್ರಕ್ಕೆ ಕೆಲಸ ಮಾಡಿಕೊಡಬಹುದು, ಮುಂದಕ್ಕೂ ಮಾಡಬಹುದು. ಏಕೆಂದರೆ ಅದು ನನ್ನ ಕರ್ತವ್ಯ. ನಾನು ಸಚಿವನಾಗಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವಾಗ, ಯಾವುದೇ ತಾರತಮ್ಯವಿಲ್ಲದೆ, ಸಂವಿಧಾನದ ಆಶಯಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣವಚನ ತೆಗೆದುಕೊಂಡಿರುತ್ತೇನೆ" ಎಂದರು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ನಡುವೆ ಭಿನ್ನಾಭಿಪ್ರಾಯವಿದ್ದರೂ ಅವರು ತೋರಿಸಿಕೊಳ್ಳುತ್ತಿಲ್ಲ. ಆದರೆ ಬಿಜೆಪಿಯ ಜಗಳ ಬೀದಿರಂಪವಾಗಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಎಂದಿಗೂ ವ್ಯಕ್ತಿಗತವಾಗಿ ಹೋಗುವವನಲ್ಲ. ವ್ಯಕ್ತಿ ಪೂಜೆಯನ್ನೂ ಮಾಡುವವನಲ್ಲ. ಬದಲಾಗಿ ಪಕ್ಷದ ಪೂಜೆ ಮಾಡುವವನು. ನಾನು ಇಲ್ಲದೇ ಹೋದರೂ ಪಕ್ಷ ಇದ್ದೇ ಇರುತ್ತದೆ, ಕೊನೆಯದಾಗಿ ಪಕ್ಷವೇ ಮುಖ್ಯ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT