ನವದೆಹಲಿ/ಬೆಂಗಳೂರು: ರಾಜ್ಯ ಬಿಜೆಪಿಯ ಆಂತರಿಕ ಕಲಹ ಇದೀಗ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, ಭಿನ್ನಾಭಿಪ್ರಾಯಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ.
ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಾಳಯ ಈಗ ದಿಲ್ಲಿಯಲ್ಲಿದ್ದು, ವಕ್ಫ್ ಕುರಿತ ಜಂಟಿ ಸಂಸದೀಯ ಸಮಿತಿಗೆ ವರದಿ ಸಲ್ಲಿಸಲು ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದೇವೆ. ಬೇರೆ ಯಾವುದೇ ಉದ್ದೇಶಕ್ಕಾಗಿ ಅಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಮಂಗಳವಾರ ಹೇಳಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿಜಯೇಂದ್ರ ಅವರೇ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ವಕ್ಫ್ ಮಂಡಳಿ ವಿರುದ್ಧ ಜೆಪಿಸಿಗೆ ವರದಿ ಸಲ್ಲಿಸಲು ನಾವು ಇಲ್ಲಿಗೆ ಬಂದಿದ್ದೇವೆ, ಇಡೀ ಸಮಿತಿಯು ಡಿಸೆಂಬರ್ 5 ರಂದು ಸಭೆ ನಡೆಸಲಿದೆ. ನಾವು ಖುದ್ದಾಗಿ ಜೆಪಿಸಿಯನ್ನು ಭೇಟಿ ಮಾಡುತ್ತೇವೆ ಎಂದು ಜಾರಕಿಹೊಳಿ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಲು ನಾವು ಸಮಯಾವಕಾಶ ಕೋರಿದ್ದೇವೆ ಎಂದು ಗೋಕಾಕ ಬಿಜೆಪಿ ಶಾಸಕರು ಹೇಳಿದ್ದಾರೆ.
ಸಂಸತ್ತಿನ ಅಧಿವೇಶನ ನಡೆಯುತ್ತಿದೆ. ಅವರು ಸಮಯ ನೀಡಿದರೆ, ನಾವು ಅವರನ್ನು ಭೇಟಿ ಮಾಡುತ್ತೇವೆ. ಇಲ್ಲದಿದ್ದರೆ ಮತ್ತೆ ಬರುತ್ತೇವೆ ಎಂದು ಜಾರಕಿಹೊಳಿ ತಿಳಿಸಿದರು.
ಈಗಾಗಲೇ ದೆಹಲಿಯಲ್ಲಿರುವ ಯತ್ನಾಳ್ ಅವರು, ಬಿಜೆಪಿಯ ರಮೇಶ್ ಜಾರಕಿಹೊಳಿ, ಕುಮಾರ ಬಗಾರಪ್ಪ ಸೇರಿ ಹಲವರೊಂದಿಗೆ ಸಭೆ ಮಾಡುತ್ತಿದ್ದಾರೆ. ಬಿಜೆಪಿ ಶಿಸ್ತು ಪಾಲನಾ ಸಮಿತಿ ಯತ್ನಾಳ್‌ಗೆ ಶೋಕಾಸ್ ನೋಟಸ್ ನೀಡಿತ್ತು. ಇಂತಿಷ್ಟು ದಿನಗಳೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಶೋಕಾಸ್ ನೋಟಿಸ್ ಬಂದರೂ ದೆಹಲಿಗೆ ತಮ್ಮ ಟೀಮ್‌ನೊಂದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೆರಳಿದ್ದಾರೆ. ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿ ರಾಜ್ಯ ಬಿಜೆಪಿಯ ಪರಿಸ್ಥಿತಿ ಹಾಗೂ ರಾಜ್ಯ ರಾಜಕೀಯದ ಬಗ್ಗೆ ವಿವರಣೆ ನೀಡಬಹುದು ಎನ್ನಲಾಗಿದೆ.
ಕಳೆದವಾರ ದೆಹಲಿಯಿಂದ ಕರೆ ಬಂದರೂ ನಾನು ಹೋಗಲ್ಲ ನಮ್ಮ ಟೀಮ್‌ನೊಂದಿಗೆ ಬಂದು ಎಲ್ಲ ವಿವರಣೆ ನೀಡುತ್ತನೆಂದು ಯತ್ನಾಳ್ ಹೇಳಿಕೆ ನೀಡಿದ್ದರು. ಇಂದು ದೆಹಲಿಗೆ ತೆರಳಿರೋ ಯತ್ನಾಳ್ ಪಾಳೆಯ, ದೆಹಲಿಯಲ್ಲಿ ರಸಹ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹೈಕಮಾಂಡ್ ಮುಂದೆ ಯಾವೆಲ್ಲಾ ಅಂಶಗಳನ್ನು ಉಲ್ಲೇಖ ಮಾಡಬೇಕು. ಉಪ ಚುನಾವಣೆ ಸೋಲು ಹೇಗಾಯಿತು? ರಾಜ್ಯಾಧ್ಯಕ್ಷರ ಮತ್ತು ಇತರ ನಾಯಕರ ಒಡನಾಟ ಹೇಗಿದೆ ಎಂಬುವುದರ ಬಗ್ಗೆ ಚರ್ಚೆ ನಡೆಸಿರಬಹದು ಎನ್ನಲಾಗಿದೆ.
ನಾವು ಯಾವುದೇ ವ್ಯಕ್ತಿಯ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. "ರಾಜ್ಯ ವಕ್ಫ್ ಬೋರ್ಡ್ ಹೊರಡಿಸಿದ ನೋಟಿಸ್‌ಗಳಿಂದ ರೈತರು, ಸನಾತನ ಧರ್ಮ ಮತ್ತು ಹಿಂದೂಗಳನ್ನು ರಕ್ಷಿಸುವ ಗುರಿಯೊಂದಿಗೆ ಹೋರಾಟ ಮಾಡುತ್ತಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ.