ಬೆಳಗಾವಿ: ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನ ವಹಿಸುವಂತೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ತಾನು 150 ಕೋಟಿ ರೂ. ಆಮಿಷವೊಡ್ಡಿದ ಬಗ್ಗೆ ಸಿಬಿಐ ತನಿಖೆಗೆ ವಹಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸೋಮವಾರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಇಂದು ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿದ ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಿಯಾಂಕ್ ಖರ್ಗೆ ಅವರು ನನ್ನ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ಹಿಂದಿನ ಅಲ್ಪಸಂಖ್ಯಾತರ ಆಯೋಗದ ಹೆಸರು ಹೇಳಿ ನನ್ನ ಮೇಲೆ ಆರೋಪ ಮಾಡಲಾಗಿದೆ. ವಕ್ಫ್ ಆಸ್ತಿ ದುರುಪಯೋಗ ಕುರಿತು ಮಾಣಿಪ್ಪಾಡಿ ವರದಿ ಕೊಟ್ಟಿದ್ದರು. ನಂತರ ಉಪಲೋಕಾಯುಕ್ತ ನ್ಯಾ.ಆನಂದ್ ಅವರು ವರದಿ ಕೊಟ್ಟಿದ್ದರು. 2016ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ನೀಡಿದ್ದರು. ಆದರೆ ಅಂದಿನ ಸಿಎಂ ಉಪಲೋಕಾಯುಕ್ತರ ವರದಿ ಮುಚ್ಚಿ ಹಾಕಿದ್ದರು ಎಂದರು.
ಅಲ್ಪಸಂಖ್ಯಾತರ ಆಯೋಗದ ಹಿಂದಿನ ಅಧ್ಯಕ್ಷರು ಸರ್ಕಾರಕ್ಕೆ ಶಿಫಾರಸು ಮಾಡಿದ್ದನ್ನು ಸಿದ್ದರಾಮಯ್ಯ ಸಚಿವ ಸಂಪುಟ ತಿರಸ್ಕರಿಸಿತು. ಸಿಎಂ ಅವರಿಗೆ ಸಿಬಿಐ ಬಗ್ಗೆ ಬಹಳ ವಿಶ್ವಾಸ ಇದೆ. ನಾನು ಸಿಎಂಗೆ ಸವಾಲ್ ಹಾಕುತ್ತೇನೆ, 150 ಕೋ ರೂ. ಟಿ ಆಮಿಷ ಆರೋಪವನ್ನು ಸಿಬಿಐಗೆ ವಹಿಸಲಿ. ಜತೆಗೆ ಅನ್ವರ್ ಮಾಣಿಪ್ಪಾಡಿ ವರದಿಯ ತನಿಖೆಯನ್ನೂ ಸಿಬಿಐಗೆ ಕೊಡಲಿ ಎಂದು ವಿಜಯೇಂದ್ರ ಆಗ್ರಹಿಸಿದರು.
ಹಗರಣಗಳ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರು ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿಎಂ ಹಿಟ್ ಅಂಡ್ ರನ್ ಮಾಡುವುದು ಬೇಡ ಎಂದು ವಿಜಯೇಂದ್ರ ಕಿಡಿ ಕಾರಿದರು.