ಬೆಳಗಾವಿ: ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಸಿದ್ಧತೆಗಳನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಮಂಗಳವಾರ ಪರಿಶೀಲಿಸಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲಿ ನಡೆಯಲಿದೆ.
ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆ ಮತ್ತು ಡಿಸೆಂಬರ್ 27 ರಂದು ಸಾರ್ವಜನಿಕ ಸಭೆ ನಡೆಸಲು ಪಕ್ಷ ನಿರ್ಧರಿಸಿದೆ.
ವೇಣುಗೋಪಾಲ್ ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪಕ್ಷದ ರಾಷ್ಟ್ರೀಯ ಖಜಾಂಚಿ ಮತ್ತು ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸಂಸದ ಅಜಯ್ ಮಾಕನ್ ಅವರು ಸಹ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೇಣುಗೋಪಾಲ್, ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ನೂರನೇ ವರ್ಷಾಚರಣೆಯ ನೆನಪಿಗಾಗಿ ನಾವು ಡಿಸೆಂಬರ್ 26 ಮತ್ತು 27 ರಂದು ಬೆಳಗಾವಿಯಲ್ಲಿ ಐತಿಹಾಸಿಕ ಸಮಾವೇಶವನ್ನು ಆಯೋಜಿಸುತ್ತಿದ್ದೇವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನವು ನಮ್ಮ ಭಾರತೀಯ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕವಾಗಿದೆ ಎಂದರು.
‘ಡಿ.26ರಂದು ಮಧ್ಯಾಹ್ನ ಎಐಸಿಸಿ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದು, ಡಿ.27ರಂದು ಬೃಹತ್ ರ್ಯಾಲಿ ನಡೆಯಲಿದೆ. ಚರ್ಚೆಯ ನಂತರ ಕಾರ್ಯಕ್ರಮದ ವಿವರಗಳನ್ನು ಅಂತಿಮಗೊಳಿಸುತ್ತೇವೆ ಎಂದರು.
ಇದಕ್ಕು ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಚಿವರು, ಪಕ್ಷದ ಶಾಸಕರು ಸೇರಿದಂತೆ ಹಲವು ಮುಖಂಡರೊಂದಿಗೆ ಪಕ್ಷದ ಕಛೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿದರು.
1924 ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಅಧಿವೇಶನವು ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನವಾಗಿತ್ತು.