ಬೆಂಗಳೂರು: ರಾಜ್ಯ ಬಿಜೆಪಿಯಿಂದ ನಾಳೆಯಿಂದ ಮೂರು ದಿನ ಗ್ರಾಮ ಚಲೋ ಅಭಿಯಾನ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಹೆಚ್. ಗೊಲ್ಲಹಳ್ಳಿ ಗ್ರಾಮದಲ್ಲಿ ‘ಗ್ರಾಮ ಚಲೋ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜೀ ಮತ್ತು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಅಪೇಕ್ಷೆಯಂತೆ ‘ಗ್ರಾಮ ಚಲೋ’ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಹಳ್ಳಿಗಳು, 19 ಸಾವಿರ ನಗರ ಬೂತ್‍ಗಳಲ್ಲಿ ಒಟ್ಟಾರೆಯಾಗಿ 42 ಸಾವಿರ ಕಾರ್ಯಕರ್ತರು ಮೂರು ದಿನಗಳ ಕಾಲ ನಿರಂತರವಾಗಿ ಈ ಅಭಿಯಾನದಲ್ಲಿ ಭಾಗವಹಿಸುತ್ತಾರೆ ಎಂದು ವಿವರಿಸಿದರು.
2047ನೇ ಇಸವಿಗೆ ಭಾರತವು ‘ವಿಕಸಿತ ಭಾರತ’ವಾಗಿ ಪರಿವರ್ತನೆ ಹೊಂದಬೇಕು; ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಕಾಣಬೇಕೆಂಬ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಕನಸು ನನಸಾಗಲು ಗ್ರಾಮಗಳೂ ಅಭಿವೃದ್ಧಿ ಹೊಂದಬೇಕಿದೆ ಎಂದು ವಿಶ್ಲೇಷಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತುಗಳು ಸಿಗಬೇಕು. ಈ ನಿಟ್ಟಿನಲ್ಲಿ ‘ಗ್ರಾಮ ಚಲೋ’ ಅಭಿಯಾನವು ಉತ್ತಮ ಅಭಿಯಾನ ಆಗಲಿದೆ. ಈ ಅಭಿಯಾನದ ಮೂಲಕ ಪ್ರತಿ ಗ್ರಾಮ, ಪ್ರತಿ ಮನೆಗೂ ಬಿಜೆಪಿ ಕಾರ್ಯಕರ್ತರು ತಲುಪಲಿದ್ದು, ಕೇಂದ್ರ ಸರಕಾರವು ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಕೊಟ್ಟ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
ಈ ಅಭಿಯಾನವು ಬಿಜೆಪಿಗೆ ದೊಡ್ಡ ಶಕ್ತಿಯಾಗಲಿದೆ. ‘ಮೋದಿ ಮತ್ತೊಮ್ಮೆ’ ಎಂಬ ವಿಚಾರವನ್ನು ಮುಂದಿಟ್ಟುಕೊಂಡು, ಮೋದಿಜೀ ಅವರು 3ನೇ ಬಾರಿಗೆ ಪ್ರಧಾನಿ ಆಗಬೇಕೆಂಬ ಆಶಯವನ್ನು ಹೊಂದಿ ಗೋಡೆ ಬರಹ ಬರೆಯಲಾಗುವುದು. ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ನಿಟ್ಟಿನಲ್ಲಿ ಈ ಅಭಿಯಾನ ನಡೆಯುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರೂ ಮೋದಿಜೀ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಆಶಿಸುತ್ತಿದ್ದಾರೆ ಎಂದು ನುಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ ಆಗಿದೆ. ಇದೇ 10 ರಂದು ರಾತ್ರಿ ನೇರವಾಗಿ ದೆಹಲಿಯಿಂದ ಮೈಸೂರಿಗೆ ತಲುಪುತ್ತಾರೆ. 11ರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದುಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಸಂಜೆ ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ ಬಿಜೆಪಿ ಕಾರ್ಯಕರ್ತರ ಸಭೆಯೂ ನಡೆಯಲಿದೆ ಎಂದು ವಿಜಯೇಂದ್ರ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ನಾಯಕರು ನಿನ್ನೆ ಮಧ್ಯಾಹ್ನ ದೆಹಲಿಯಲ್ಲಿ ಮಾಂಸಾಹಾರ ಸೇವಿಸಿ ರಾತ್ರಿ ಸುತ್ತೂರು ಜಗದ್ಗುರುಗಳ ಗದ್ದುಗೆಗೆ ಭೇಟಿ ಕೊಟ್ಟ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಇದು ಬಹಳ ದುರದೃಷ್ಟಕರ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳು ಎಂಬುದನ್ನು ಎಲ್ಲೋ ಒಂದು ಕಡೆ ಮರೆಯುತ್ತಿದ್ದಾರೆ ಎಂಬುದು ನನ್ನ ಭಾವನೆ. ಇದು ಮೊದಲ ಬಾರಿ ಏನಲ್ಲ. ಹಲವು ಸಂದರ್ಭಗಳಲ್ಲಿ ಈ ರೀತಿ ಘಟನೆಗಳು ಪುನರಾವರ್ತನೆ ಆಗಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ದೇವರ ಬಗ್ಗೆ ಎಷ್ಟು ಭಕ್ತಿ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಬೇರೆ ಮಾತು. ಆದರೆ, ರಾಜ್ಯದ ಮುಖ್ಯಮಂತ್ರಿಯಾಗಿ ಅವರ ನಡವಳಿಕೆಯನ್ನು ಸಮಾಜ, ಪ್ರತಿಯೊಬ್ಬರೂ ಗಮನಿಸುತ್ತಾರೆ. ಈ ಘಟನೆ ನಿಜವಾಗಿಯೂ ಖಂಡನೀಯ. ಅದರಲ್ಲೂ ಸುತ್ತೂರಿನ ಪವಿತ್ರ ಗದ್ದುಗೆಗೆ ಭೇಟಿ ಕೊಟ್ಟದ್ದು ನಿಜವಾಗಲೂ ಒಂದು ದುರಂತ’ ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಸರ್ಕಾರ 'ಸುಳ್ಳು ನಿರೂಪಣೆ'ಯನ್ನು ಬಿಂಬಿಸುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಲೋಕಸಭಾ ಚುನಾವಣೆ ಸಂಬಂಧ ಸರ್ವೇ ಫಲಿತಾಂಶವೊಂದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಇಡೀ ದೇಶದಲ್ಲಿ ನರೇಂದ್ರ ಮೋದಿ ಅವರ ಪರವಾದ ಅಲೆ ಇದೆ. ಸಹಜವಾಗಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ನರೇಂದ್ರ ಮೋದಿಜೀ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ದೇಶದ ಜನರಿಗೆ ಮನವರಿಕೆ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದ್ದೇವೆ. 28 ಸೀಟುಗಳ ಮತ ಎಣಿಕೆ ಸಂದರ್ಭದಲ್ಲಿ ಒಂದೊಂದು ಸೀಟು ಗೆಲ್ಲಲು ಕೂಡ ಕಾಂಗ್ರೆಸ್‍ನವರು ಪರಿತಪಿಸುತ್ತಾರೆ. ಅಂಥ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ನಮ್ಮ ಕಾರ್ಯಕರ್ತರು ರಣೋತ್ಸಾಹದಲ್ಲಿದ್ದಾರೆ. ಮೋದಿ ಮತ್ತೊಮ್ಮೆ ಎಂಬ ವಿಷಯದಲ್ಲಿ ಮತದಾರರೂ ಉತ್ಸಾಹದಲ್ಲಿದ್ದಾರೆ. ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದರು.