ಜಿಟಿ ದೇವೇಗೌಡ
ಜಿಟಿ ದೇವೇಗೌಡ 
ರಾಜಕೀಯ

ಕುಮಾರಸ್ವಾಮಿ ಮನೆಯಲ್ಲಿ ಸಭೆ: ಮಂಡ್ಯದಿಂದ ಜೆಡಿಎಸ್ ಸ್ಪರ್ಧೆ ಖಚಿತ!

Shilpa D

ಬೆಂಗಳೂರು: ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಹಗ್ಗಜಗ್ಗಾಟ ಮುಂದುವರಿದೆ. ಇದರ ನಡುವೆ ಭಾನುವಾರ ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿರುವ ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಪಕ್ಷದ ನಾಯಕರು ಹಾಗೂ ಮಂಡ್ಯ ಮುಖಂಡರ ಸಭೆ ನಡೆಯಿತು.

ಮಂಡ್ಯ ಸಂಸದೆ ಸುಮಲತಾ ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಆಪ್ತರು, ಬೆಂಬಲಿಗರ ಜೊತೆ ಚರ್ಚೆ ನಡೆಸಿದ ಬೆನ್ನಲ್ಲೇ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ. ರಾಮನಗರದ ಕೇತಗಾನಹಳ್ಳಿ ಬಳಿಯಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಫಾರ್ಮ್‌ಹೌಸ್‌ನಲ್ಲಿ ಸಭೆಯಲ್ಲಿ ಭಾಗವಹಿಸುವ ಮುನ್ನ ಮಾತನಾಡಿ ಜಿಟಿಡಿ, ಮಂಡ್ಯ ಸೀಟು ಜೆಡಿಎಸ್‌ಗೆ ಹಂಚಿಕೆಯಾಗಲಿದೆ. ಸ್ಥಳೀಯ ಮುಖಂಡರ ಜೊತೆ ಸಭೆ ನಡೆಸಿ ಚುನಾವಣೆ ಸಿದ್ಧತೆ ಮಾಡುತ್ತಿದ್ದೇವೆ, ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ ಬಳಿಕ ತೀರ್ಮಾನ ಮಾಡಲಾಗುವುದು ಎಂದರು.

ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್‌ ವಿರುದ್ಧ ಗೆದ್ದಿದ್ದ ಸುಮಲತಾ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಉತ್ಸಾಹದಲ್ಲಿದ್ದರು. ಆದರೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಸುಮಲತಾ ಅವರಿಗೆ ಹಿನ್ನಡೆಯಾಗಿದೆ. ಅಧಿಕೃತವಾಗಿ ಸುಮಲತಾ ಬಿಜೆಪಿ ಸೇರಿಲ್ಲವಾದರೂ, ಬಿಜೆಪಿಗೆ ಬಾಹ್ಯ ಬೆಂಬಲ ನೀಡಿದ್ದರು.

ಸುಮಲತಾ ಅವರು ಅಧಿಕೃತ ಬಿಜೆಪಿ ಸದಸ್ಯರಲ್ಲ. ಆದರೆ ಅವರು ಮಂಡ್ಯದಿಂದ ಟಿಕೆಟ್ ಕೇಳುವುದು ತಪ್ಪೇನಿಲ್ಲ. ಮಂಡ್ಯದಿಂದ ಅವರು ಬಿಜೆಪಿ ವರಿಷ್ಠರ ಬಳಿ ಟಿಕೆಟ್‌ಗೆ ಬೇಡಿಕೆ ಇಟ್ಟರೆ, ಬೆಂಗಳೂರು ಉತ್ತರ ಕ್ಷೇತ್ರ ಕೊಡುವ ಲೆಕ್ಕಾಚಾರ ಇರಬಹುದು ಎಂದು ನನಗೆ ಹಲವರು ಹೇಳಿದ್ದಾರೆ

ಮುಖಂಡ ಸಿ.ಎಸ್. ಪುಟ್ಟರಾಜು ಮಾತನಾಡಿ, ‘ಮೊದಲ ಹಂತದಲ್ಲೇ ಹಾಸನ ಮತ್ತು ಮಂಡ್ಯ ಟಿಕೆಟ್ ವಿಷಯ ಇತ್ಯರ್ಥವಾಗಲಿದೆ. ಮತಗಳ ಆಧಾರದ ಮೇಲೆ ತೀರ್ಮಾನ ಮಾಡಿದರೂ ಎರಡೂ ಕಡೆ ಜೆಡಿಎಸ್‌ಗೆ ಸಿಗಲಿದೆ. ನಮ್ಮಲ್ಲೂ ಸ್ಪರ್ಧೆಗೆ ಪ್ರಬಲ ಆಕಾಂಕ್ಷಿಗಳಿದ್ದಾರೆ. ಹಾಗಾಗಿ, ಚುನಾವಣೆ ಕುರಿತು ಚರ್ಚಿಸಲು ಸಭೆ ಕರೆದಿದ್ದಾರೆ’ ಎಂದು ಹೇಳಿದರು.

ಪಕ್ಷ ಏನೇ ತೀರ್ಮಾನ ಮಾಡಿದರೂ ಅದಕ್ಕೆ ಬದ್ಧನಾಗಿರುತ್ತೇನೆ. ನಿಖಿಲ್ ಅವರನ್ನು ಅಭ್ಯರ್ಥಿ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ಒಟ್ಟಾರೆ ಮಂಡ್ಯ ಲೋಕಸಭಾ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗುತ್ತಿದ್ದು, ಟಿಕೆಟ್ ಘೋಷಣೆಯಾದ ಬಳಿಕ ಜಿಲ್ಲೆಯ ರಾಜಕೀಯ ಮತ್ತೊಂದು ಮಗ್ಗುಲು ಬದಲಿಸುವ ಎಲ್ಲಾ ಸಾಧ್ಯತೆ ಇದೆ.

SCROLL FOR NEXT