ರಾಜಕೀಯ

ಹೆಗಡೆಯವರ ಹೇಳಿಕೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ: ಸಿಎಂ ಸಿದ್ದರಾಮಯ್ಯ

Manjula VN

ಬಾಗಲಕೋಟೆ: ರಾಜಕೀಯ ಉದ್ದೇಶದಿಂದ ಉತ್ತರ ಕನ್ನಡ ಸಂಸದರಾದ ಅನಂತ ಕುಮಾರ್​ ಹೆಗಡೆಯವರು ಬಳಸಿದ ಭಾಷೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ, ಕೇಂದ್ರದ ಮಂತ್ರಿಯಾಗಿದ್ದಾಗ, ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದ ಅನಂತ ಕುಮಾರ್ ಹೆಗಡೆ ಅವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವೇ?''ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ತಮ್ಮ ಕುರಿತು ಹೆಗಡೆಯವರು ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿ, ಅವರ ಭಾಷೆ ಆ ರೀತಿ ಇರುತ್ತದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಗೌರವ ಕೊಡುವವರೂ ಇದ್ದಾರೆ. ಕೊಡದೇ ಇರುವವರೂ ಇದ್ದಾರೆ. ರಾಜಕೀಯವಾಗಿ ಮಾತನಾಡುವವರಿಗೆ ಗೌರವ ಕೊಡಿ ಎನ್ನಲು ಆಗುತ್ತದೆಯೇ? ಅವರು ರಾಜಕೀಯವಾಗಿ ಅಶ್ಲೀಲ ಪದಗಳನ್ನು ಬಳಸಿದರೆ ಅವರ ಘನತೆಗೆ ಕುಂದು ಬರುತ್ತದೆ ಹೊರತು ನನಗಲ್ಲ ಎಂದು ಹೇಳಿದರು.

ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಂಸದ ಅನಂತ ಕುಮಾರ್​​ ಹೆಗಡೆ, ಅಂದು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು. ಈ ಆಂದೋಲನದಲ್ಲಿ ಗೋಲಿಬಾರ್ ಆಗಿ ಹತ್ತಾರು ಸಂತರೂ ಸತ್ತರು. ಇಂದಿರಾಗಾಂಧಿ ಸಮ್ಮುಖದಲ್ಲಿ ಈ ಹತ್ಯೆ ನಡೆಯಿತು ಎಂದು ಹೇಳಿದ್ದರು.

ಅಲ್ಲದೇ, ಕೆಲವರು ಜಾತಿ, ಭಾಷೆ, ಪ್ರಾದೇಶಿಕ ಇತರ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದ್ದಾರೆ. ಈಗಲೂ ಅದೇ ಕೆಲಸ ನಡೆಯುತ್ತಿದೆ. ಆದರೂ ಕೂಡ ಸಮಾಜ ಒಟ್ಟಿಗೆ ನಿಂತಿದೆ. ಹೀಗಾಗಿ ಈಗಿನ ಗೆಲುವನ್ನು ಮುಂದಿನ ಶತಮಾನದಲ್ಲೂ ನೆನೆಯುವಂತಿರಬೇಕು. ಅಮಿತ್​ ಶಾ ಅವರು ಹೇಳಿರುವಂತೆ ಈ ಬಾರಿಯ ಗೆಲುವು ಮುಂದಿನ ದಿನಗಳಲ್ಲಿ ಅಳಿಸಲು ನಮ್ಮಿಂದಲೂ ಆಗಬಾರದು. ಗೆಲುವಿನ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು ಎಂದು ತಿಳಿಸಿದ್ದರು.

ನಮ್ಮ ವಿರೋಧ ಕಾಂಗ್ರೆಸ್​ ಅಲ್ಲ. ಆದರೆ, ನಮ್ಮ ವಿರೋಧಿ ಸಿದ್ದರಾಮಯ್ಯ. ಪ್ರಜಾಪ್ರಭುತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು, ಕಳೆದುಕೊಳ್ಳುವುದು ಸಾಮಾನ್ಯ. ರಾಮ ಜನ್ಮಭೂಮಿ ಆಮಂತ್ರಣ ಬರದಿದ್ದಾಗ, ಸಿದ್ದರಾಮಯ್ಯ ಅವರು ತಮಗೆ ಆಹ್ವಾನ ಬಂದಿಲ್ಲ ಎಂದು ಹೇಳಿದರು. ಬಳಿಕ ಆಮಂತ್ರಣ ಬಂದಮೇಲೂ ಅಯೋಧ್ಯೆಗೆ ಹೋಗಲ್ಲ ಎಂದರು. ಇದೀಗ, ಅಯೋಧ್ಯೆಗೆ ಹೋಗುತ್ತೇನೆ, ಆದರೆ ಜನವರಿ 22ಕ್ಕೆ ಹೋಗುವುದಿಲ್ಲ. ಆಮೇಲೆ ಹೋಗುತ್ತೇನೆ ಎಂದಿದ್ದಾರೆ ಎಂದು ​ ವಾಗ್ದಾಳಿ ನಡೆಸಿದ್ದರು.

SCROLL FOR NEXT