ರಾಜಕೀಯ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ: ಡಾ. ಯತೀಂದ್ರ

Sumana Upadhyaya

ಹಾಸನ: ಸಿಎಂ ಹುದ್ದೆ ಮತ್ತೆ ಸುದ್ದಿಯಾಗಿದೆ. ಈ ಬಾರಿ ಸುದ್ದಿಯಾಗಿರುವುದು ಸ್ವತಃ ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಿಂದ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಿನ್ನೆ ಹಾಸನದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದಲ್ಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಲಾಗುತ್ತದೆ. ಇದರಲ್ಲಿ ಹೆಚ್ಚು ಸ್ಥಾನ ಗೆದ್ದರೆ ಅಡೆತಡೆ ಇಲ್ಲದೆ 5 ವರ್ಷ ಅವರು ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ಹೇಳಿದ್ದಾರೆ. 

ಚುನಾವಣೆಗೂ ಮೊದಲು 5 ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಸರ್ಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಅವುಗಳನ್ನು ಜಾರಿಗೊಳಿಸಲಾಗಿದೆ. ಬಡವರು, ಶೋಷತರಿಗಾಗಿ ಕೆಲಸ ಮಾಡುವ ಹಂಬಲ ಕಾಂಗ್ರೆಸ್​ಗೆ ಇದೆ. ಹಾಗಾಗಿ ನೀವೆಲ್ಲರೂ ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡಬೇಕು ಎಂದು ಯತೀಂದ್ರ ಕರೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ನೈತಿಕವಾಗಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬೆಂಬಲ ಸಿಗಲಿದೆ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿ ಖರ್ಚು ಆಗುತ್ತದೆ. ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣವನ್ನು ಖರ್ಚು ಮಾಡಿಲ್ಲ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕು. ಆಗ ಸಿದ್ದರಾಮಯ್ಯ 5 ವರ್ಷ ಗ್ಯಾರಂಟಿ ಯೋಜನೆ ಮುಂದುವರಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಕನಕ ಜಯಂತಿ ಆಚರಣೆ ಶುರು ಮಾಡಿದರು. ನೀವು ಬೆಂಬಲಿಸಿದ್ದರಿಂದಲೇ 2ನೇ ಬಾರಿ ಸಿಎಂ ಆದರು ಎಂದರು.

ಯತೀಂದ್ರ ಅವರ ಈ ಹೇಳಿಕೆಗೆ ಡಿ ಕೆ ಶಿವಕುಮಾರ್ ಬಣ ಮತ್ತು ಕಾಂಗ್ರೆಸ್ ನ ಕೆಲವು ನಾಯಕರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

SCROLL FOR NEXT