ರಾಜಕೀಯ

ನಿಗಮ-ಮಂಡಳಿ ಪಟ್ಟಿಯಲ್ಲಿ ಕಲಬುರಗಿ ನಾಯಕರ ಹೆಸರು: ಬದಲಾವಣೆಗೆ ಸಿಎಂ, ಡಿಸಿಎಂ ಸಿಟ್ಟು; ಖರ್ಗೆ ಕೈವಾಡ?

Shilpa D

ಬೆಂಗಳೂರು: ಹೈಕಮಾಂಡ್‌ ಅನುಮೋದನೆ ನೀಡಿದ್ದ ನಿಗಮ-ಮಂಡಳಿಗಳಿಗೆ ನೇಮಕ ಪಟ್ಟಿಯಲ್ಲಿ ತಮಗೆ ಮಾಹಿತಿಯನ್ನೇ ನೀಡದೆ ಕೆಲವು ಹೆಸರು ಸೇರಿಸಿ ಮಾರ್ಪಾಡು ಮಾಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಬ್ಬರು ನಾಯಕರ ಅಸಮಾಧಾನ ತಣಿಸಲು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಭಾನುವಾರ ಚರ್ಚೆ ನಡೆಸಿ  ಕಸರತ್ತು ನಡೆಸಿದ್ದಾರೆ. ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ನಿಗಮ-ಮಂಡಳಿಗಳಿಗೆ 37 ಶಾಸಕರು, 39 ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರ ಸಹಿ ಹೊಂದಿದ್ದ ಆ ಪಟ್ಟಿ ಬಿಡುಗಡೆ ಆಗುವ ಮೊದಲೇ ಪಕ್ಷದ ವಲಯದಲ್ಲಿ ಬಹಿರಂಗವಾಗಿತ್ತು. ಆದರೆ, ಇನ್ನೇನು ಪಟ್ಟಿ ಪ್ರಕಟ ಆಗಲಿದೆ ಎನ್ನುವಷ್ಟರಲ್ಲಿ ಅದಕ್ಕೆ ತಡೆಬಿದ್ದಿದೆ. ಹೈಕಮಾಂಡ್‌ ಸೇರಿಸಿದ್ದ ಕೆಲವು ಹೆಸರುಗಳಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದ್ದೇ ಪಟ್ಟಿ ಬಿಡುಗಡೆ ಆಗದಿರಲು ಕಾರಣ. ಈ ಪಟ್ಟಿ ಪರಿಷ್ಕರಣೆಗೊಳ್ಳುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ.

ಕಲಬುರಗಿ ಭಾಗದ ಕೆಲವು ಕಾರ್ಯಕರ್ತರ ಹೆಸರು ಪಟ್ಟಿಯಲ್ಲಿ ಇದ್ದುದಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಹಿತಿಯನ್ನೇ ನೀಡದೆ ಕೆಲವು ಕಾರ್ಯಕರ್ತರ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಇಬ್ಬರೂ ಬೇಸರ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಭಾಗದ ಲಲಿತ್ ರಾಘವ್, ಸಿ. ನರೇಂದ್ರ, ಮಝರ್ ಖಾನ್, ಜಗದೇವ ಗುತ್ತೆದಾರ ಅವರು ಹೆಸರು ನಿಗಮ ಮಂಡಳಿ ಪಟ್ಟಿಯಲ್ಲಿತ್ತು. ಬೇರೆ ನಾಯಕರ ಸೂಚನೆಯ ಮೇರೆಗೆ ಈ ನಾಲ್ವರ ಹೆಸರನ್ನು ಸೇರಿಸಿ ಕೆ.ಸಿ. ವೇಣುಗೋಪಾಲ್ ಅವರು ಮುಖ್ಯಮಂತ್ರಿಗೆ ಅಂತಿಮ ಪಟ್ಟಿ ರವಾನಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಲಬುರಗಿ ಭಾಗದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿದವರು ಯಾರು? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ತಮ್ಮ ಜಿಲ್ಲೆಯ ಕಾರ್ಯಕರ್ತರ ಹೆಸರು ಸೇರ್ಪಡೆ ಮಾಡಿಸಿದ್ದರೇ? ಸಚಿವ ಪ್ರಿಯಾಂಕ್ ಖರ್ಗೆ ಶಿಫಾರಸು ಮಾಡಿದ್ದರೇ ಎಂಬ ಅನುಮಾನಗಳು ಪಕ್ಷದ ವಲಯದಲ್ಲಿ ಹುಟ್ಟಿಕೊಂಡಿದೆ. ಈ ಎಲ್ಲ ಕಾರಣಗಳಿಗೆ ಪಟ್ಟಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಅಲ್ಲದೆ, ಈ ಕಾರಣಕ್ಕೆ ಪಟ್ಟಿ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

SCROLL FOR NEXT