ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಯ ಆಪರೇಷನ್ ಸಕ್ಸಸ್ ಆಗಿದೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಹೈಕಮಾಂಡ್ ಜೊತೆ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತೆ ಮಾತೃ ಪಕ್ಷಕ್ಕೆ ವಾಪಾಸಾಗಿದ್ದಾರೆ.
ಇಂದು ಗುರುವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರನಾಯಕರನ್ನು ಭೇಟಿ ಮಾಡಿದ ನಂತರ ಬಿಜೆಪಿಗೆ ಮತ್ತೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ತೊರೆದಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಬಿ ವೈ ವಿಜಯೇಂದ್ರ ಈ ವಿಷಯ ತಿಳಿಸಿದ್ದಾರೆ.
ಪಕ್ಷ ಸೇರ್ಪಡೆಗೂ ಮುನ್ನ ಶೆಟ್ಟರ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೊಂದಿಗೆ ದೆಹಲಿಯಲ್ಲಿನ ಅಮಿತ್ ಶಾ ನಿವಾಸದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಾತುಕತೆ ವೇಳೆ ಶೆಟ್ಟರ್ ಮನವೊಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದು, ಪಕ್ಷಕ್ಕೆ ಮರಳಲು ಶೆಟ್ಟರ್ ಒಪ್ಪಿಗೆ ಸೂಚಿಸಿದ್ದರು.
ಕಾಂಗ್ರೆಸ್ಗೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆಗೂ ಮುನ್ನ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಇಮೇಲ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. ರಾಜೀನಾಮೆಗೂ ಮುನ್ನ ಶೆಟ್ಟರ್ ಅವರು ಹೊರಟ್ಟಿಗೆ ಕರೆ ಮಾಡಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು. ಈ ವೇಳೆ ಪತ್ರದ ಮೂಲಕ ಬೇಡ, ನೇರವಾಗಿ ಬಂದು ರಾಜೀನಾಮೆ ನೀಡುವಂತೆ ಸೂಚಿಸಿದ್ದರು.