ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆಂಬ ಯೋಗೇಶ್ವರ್ ಹೇಳಿಕೆಯನ್ನು ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.
ಶನಿವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭಾ ಉಪಚುನಾವಣಾ ವಿಚಾರವಾಗಿ ಮಿತ್ರ ಪಕ್ಷಗಳ ನಡುವೆ ಚರ್ಚೆಯಾಗಿಲ್ಲ. ಬಿಜೆಪಿ ಹೈಕಮಾಂಡ್ ಜತೆಗೂ ಯಾವುದೇ ಮಾತುಕತೆ ನಡೆದಿಲ್ಲ. ಅಭ್ಯರ್ಥಿ ಘೋಷಣೆಗೆ ಇನ್ನೂ ಸಮಯಾವಕಾಶ ಇದೆ. ಉಪಚುನಾವಣೆ ಘೋಷಣೆ ಬಳಿಕ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಮಾಧ್ಯಮಗಳು ತಮಗೆ ಇಷ್ಟಬಂದವರ ಹೆಸರನ್ನು ಹರಿಬಿಡುತ್ತಿವೆ. ಈ ಮೊದಲು ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ವರದಿ ಬಿತ್ತರಿಸಿದವು. ಈಗ ಸಂಸದ ಡಾ.ಸಿ.ಎನ್.ಮಂಜುನಾಥ್ ಪತ್ನಿ ಅನಸೂಯ ಹೆಸರನ್ನು ಹರಿಬಿಟ್ಟಿವೆ. ಈ ಬಗ್ಗೆ ಮಾಧ್ಯಮಗಳೇ ತೀರ್ಮಾನಿಸುತ್ತಿವೆ. ಆದರೆ, ವಾಸ್ತವವಾಗಿ ಬಿಜೆಪಿ-ಜೆಡಿಎಸ್‌ನಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ಮಾತನಾಡಿದ್ದ ಯೋಗೇಶ್ವರ್ ಅವರು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ನನ್ನನ್ನೇ ನಿಲ್ಲುವಂತೆ ಹೇಳಿದ್ದಾರೆ. ಅದಕ್ಕೆ ಅಧಿಕೃತ ಅನುಮೋದನೆ ಅವರೇ ಕೊಡಬೇಕು. ಮೈತ್ರಿ ಪಕ್ಷದ ವರಿಷ್ಠರು ಅಧಿಕೃತ ಘೋಷಣೆ ಮಾಡಬೇಕು. ಹಾಗಾಗಿ ನೀವೇ ಬಂದು ಹೆಸರು ಘೋಷಣೆ ಮಾಡಿ ಎಂದು ಅವರನ್ನೇ ಕೇಳಿದ್ದೇನೆ. ಮೈತ್ರಿ ಪಕ್ಷದಿಂದ ನಾನೇ ಅಭ್ಯರ್ಥಿ ಎಂದು ಹೇಳಿದ್ದರು.
ಕಳೆದ ವಾರ ಡಿಸಿಎಂ ಡಿ ಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ನಡೆಸಿದ ಮೂರು ದಿನಗಳ ಜನಸ್ಪಂದನಾ ಕಾರ್ಯಕ್ರಮ ಜನಸ್ಪಂದನವಲ್ಲ, ಅದು ಸರ್ಕಾರಿ ಸಂತೆ. “ಅಧಿಕಾರಿಗಳನ್ನು ಚನ್ನಪಟ್ಟಣಕ್ಕೆ ಕರೆತಂದು ಹೆದರಿಸಿ ಜನರಿಗೆ ಆಸೆ ತೋರಿಸುವ ಕೆಲಸ ನಡೆದಿದೆ. ಕಳೆದ ಒಂದು ಕಾಲು ವರ್ಷದ ಅವಧಿಯಲ್ಲಿ ಸರ್ಕಾರ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿಲ್ಲ ಎಂದು ತಿಳಿಸಿದ್ದರು.
ಸರ್ಕಾರ ಬಂದಾಗಿನಿಂದಲೂ ಚನ್ನಪಟ್ಟಣಕ್ಕೆ ಡಿ ಕೆ ಶಿವಕುಮಾರ್ ಬಂದಿರಲಿಲ್ಲ. ಈಗ ಚನ್ನಪಟ್ಟಣ ಖಾಲಿ ಇದೆ. ಬಂದಿದ್ದೇನೆ ಅಂತ ಸುಳ್ಳು ಹೇಳಿದ್ದಾರೆ. ಜನರಿಗೆ ಮನೆ ಕೊಡುವೆ, ಸೈಟ್ ಕೊಡುವೆ ಅಂತ ಸುಳ್ಳು ಆಶ್ವಾಸನೆ ಕೊಡ್ತಿದ್ದಾರೆ. ಟೌನ್ ವ್ಯಾಪ್ತಿ ಬಿಟ್ಟರೆ ಬಹುತೇಕ ತಾಲೂಕಿನ ಜನತೆಗೆ ಮನೆ ಸಮಸ್ಯೆ ಇಲ್ಲ.
ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ಒನ್ ಮ್ಯಾನ್ ಶೋ ಮಾಡಿದ್ದಾರೆ. ಎಂಪಿಗೆ ಆಹ್ವಾನ ನೀಡಿಲ್ಲ, ನನಗೆ ಆಹ್ವಾನ ನೀಡಿಲ್ಲ. ಸರ್ಕಾರದ ಪ್ರೋಟೋಕಾಲ್ ಸರಿಯಾಗಿ ಫಾಲೋ ಮಾಡದೇ ಕಾರ್ಯಕ್ರಮ ಮಾಡಿದ್ದಾರೆ. ಇದು ಕೇವಲ ಚುನಾವಣಾ ತಂತ್ರ ಎಂದು ಕಿಡಿಕಾರಿದ್ದರು.