ಬೆಂಗಳೂರು: ಲೋಕಸಭಾ ಚುನಾವಣೆ ಜೊತೆಗೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಮತ ಏಣಿಕೆ ಪ್ರಗತಿಯಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲ್ ನಾಯಕ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.
21ನೇ ಸುತ್ತಿನ ಮತ ಏಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಅವರು 107162 ಮತಗಳನ್ನು ಪಡೆದಿದ್ದು, ಎದುರಾಳಿ ಅಭ್ಯರ್ಥಿಗಳಿಗಿಂತ 17955 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ನರಸಿಂಹ ನಾಯಕ(ರಾಜುಗೌಡ) 89207 ಮತಗಳನ್ನು ಪಡೆದಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಸುರಪುರದ ಕಾಂಗ್ರೆಸ್ ಶಾಸಕ ರಾಜ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರಕ್ಕೆ ಲೋಕಸಭೆ ಚುನಾವಣೆ ಜೊತೆಗೆ ಉಪ ಚುನಾವಣೆ ನಡೆದಿತ್ತು. ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿತ್ತು ಮತ್ತು ಬಿಜೆಪಿ ಕೂಡ ಕ್ಷೇತ್ರ ಉಳಿಸಿಕೊಳ್ಳುವ ಸಲುವಾಗಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್ ಅವರನ್ನೇ ಕಣಕ್ಕೆ ಇಳಿಸಿ ಅನುಕಂಪದ ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.
2023ರಲ್ಲಿ ನಡೆದ ವಿಧಾಸಭೆ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ್ ತಂದೆ, ದಿ. ರಾಜಾ ವೆಂಕಟಪ್ಪ ನಾಯಕ್ ಅವರು 1,13,559 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಬಿಜೆಪಿಯ ರಾಜುಗೌಡ 88,336 ಮತಗಳನ್ನು ತಮ್ಮದಾಗಿಸಿಕೊಂಡಿದ್ದರು. ರಾಜಾ ವೆಂಕಟಪ್ಪ ನಾಯಕ್ ಅವರು ರಾಜುಗೌಡ ಅವರನ್ನು 25 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.