ನವದೆಹಲಿ: ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು ಕರ್ನಾಟಕದ ಐವರು ಸಚಿವರಿಗೆ ಸಿಕ್ಕಿರುವ ಖಾತೆಗಳ ಪಟ್ಟಿ ಇಲ್ಲಿದೆ.
ಪ್ರಧಾನಿ ಮೋದಿ ಸಂಪುಟದಲ್ಲಿ ಕರ್ನಾಟಕದಿಂದ ಎಚ್ ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಐವರು ಸಚಿವರಿದ್ದಾರೆ. ಇದೀಗ ಅವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಎಚ್ಡಿ ಕುಮಾರಸ್ವಾಮಿ ಬಯಸಿದ್ದ ಕೃಷಿ ಖಾತೆ ಮಿಸ್ ಆಗಿದ್ದು ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಿಕ್ಕಿದೆ. ಇನ್ನು ಕರ್ನಾಟಕದಿಂದ ಕ್ಯಾಬಿನೆಟ್ ಸಚಿವರಾಗಿ ಎಚ್ ಡಿ ಕುಮಾರಸ್ವಾಮಿ. ಪ್ರಹ್ಲಾದ್ ಜೋಶಿ, ನಿರ್ಮಾಲಾ ಸೀತಾರಾಮನ್ ಹಾಗೂ ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಪ್ರಮಾಣವಚನ ಸ್ವೀಕರಿಸಿದ್ದರು.
ಕರ್ನಾಟಕ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಹಿಂದೆ ನಿರ್ವಹಿಸುತ್ತಿದ್ದ ಹಣಕಾಸು ಇಲಾಖೆಯಲ್ಲೇ ಮುಂದೂವರೆದಿದ್ದಾರೆ. ಕಳೆದ ಬಾರಿ ಸಂಸದೀಯ ವ್ಯವಹಾರ ಖಾತೆ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಈ ಬಾರಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಿಕ್ಕಿದೆ. ಇದರ ಜೊತೆಗೆ ನವೀಕರಿಸಬಹುದಾದ ಇಂಧನ ಇಲಾಖೆಯ ಜವಾಬ್ದಾರಿ ಸಹ ನೀಡಲಾಗಿದೆ.
ಇನ್ನು ಪ್ರಧಾನಿ ಮೋದಿ ಸಂಪುಟದಲ್ಲಿ ರಾಜ್ಯ ಖಾತೆ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ನೀಡಲಾಗಿದ್ದರೆ ಮೊದಲ ಬಾರಿಗೆ ರಾಜ್ಯ ಖಾತೆ ಸಚಿವರಾಗಿರುವ ವಿ ಸೋಮಣ್ಣ ಅವರಿಗೆ ಜಲ ಶಕ್ತಿ ರಾಜ್ಯ ಖಾತೆ ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಖಾತೆ ನೀಡಲಾಗಿದೆ.