ಬಿಜೆಪಿ ಟ್ವೀಟ್ ಸಮರ
ಬಿಜೆಪಿ ಟ್ವೀಟ್ ಸಮರ BJP Twitter
ರಾಜಕೀಯ

ಹೇಳಿದ್ದು ''ಬ್ರ್ಯಾಂಡ್ ಬೆಂಗಳೂರು''.. ಮಾಡಿದ್ದು ''ಬಾಂಬ್ ಬೆಂಗಳೂರು'': ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್ ಸಮರ, ಸಿದ್ದು ತಿರುಗೇಟು

Srinivasamurthy VN

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವೀಟ್ ಸಮರ ಮುಂದುವರೆಸಿದ್ದು, ಬಿಜೆಪಿ ಕರ್ನಾಟಕದ ಮತ್ತೊಂದು ಟ್ವೀಟ್ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

ಕರ್ನಾಟಕದಲ್ಲಿ ಬಿಜೆಪಿ ಭಾನುವಾರ ಕಾಂಗ್ರೆಸ್ ಸರ್ಕಾರ ನಗರವನ್ನು 'ಬ್ರಾಂಡ್ ಬೆಂಗಳೂರು' ಬದಲಿಗೆ 'ಬಾಂಬ್ ಬೆಂಗಳೂರು' ಆಗಿ ಪರಿವರ್ತಿಸಿದೆ ಎಂದು ಟೀಕಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನೂ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವಿಟರ್ ನಲ್ಲಿ "ಅವರು ಬ್ರಾಂಡ್ ಬೆಂಗಳೂರು ಎಂದು ಹೇಳಿದರು. ಆದರೆ ಅವರು ಅದನ್ನು ಬಾಂಬ್ ಬೆಂಗಳೂರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದೆ.

ಅಂತೆಯೇ ಇದೇ ವಿಚಾರವಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, 'ಫೆಬ್ರವರಿ 27 ರಂದು ವಿಧಾನಸೌಧದೊಳಗೆ 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ ಕೂಗಿದ್ದಕ್ಕೂ ಮತ್ತು ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ 10 ಮಂದಿ ಗಾಯಗೊಂಡಿದ್ದ ಸ್ಫೋಟಕ್ಕೂ ಸಂಬಂಧವಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಘೋಷವಾಕ್ಯದ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತನಿಖಾ ವರದಿಯನ್ನು ಈಗಾಗಲೇ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಅದು ಇನ್ನೂ ಬಹಿರಂಗವಾಗಿಲ್ಲ ಎಂದು ಹೇಳಿದರು. ಅಂತೆಯೇ ರಾಜ್ಯದಲ್ಲಿ ಆಡಳಿತಾರೂಢ ಸರ್ಕಾರ ಎಫ್‌ಎಸ್‌ಎಲ್ ವರದಿಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, ಅವರು ಆ ವರದಿಯನ್ನು ತಿರುಚಿ ಮತ್ತೊಂದು ಎಫ್‌ಎಸ್‌ಎಲ್ ವರದಿಯನ್ನು ತಂದರೂ ಆಶ್ಚರ್ಯವಿಲ್ಲ. ಈ ಘಟನೆಗಳಿಂದ ಬೆಂಗಳೂರಿನ ಜನರು ಅಸುರಕ್ಷಿತರಾಗಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ತಿರುಗೇಟು

ಇನ್ನು ಬಿಜೆಪಿ ಟ್ವೀಟ್ ಸಮರಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 'ಬಿಜೆಪಿ ಅಧಿಕಾರಾವಧಿಯಲ್ಲಿ ನಾಲ್ಕು ಬಾಂಬ್ ಸ್ಫೋಟವಾದಾಗ ಅದನ್ನು ಏನೆಂದು ಕರೆಯಬೇಕು? ಮಂಗಳೂರು ಕುಕ್ಕರ್ ಸ್ಫೋಟ ನಡೆದಾಗ ಆಡಳಿತ ನಡೆಸುತ್ತಿದ್ದವರು ಯಾರು? ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ಸ್ಫೋಟ ಸಂಭವಿಸಿತ್ತಲ್ಲ... ಆಗ ಆಡಳಿತ ನಡೆಸುತ್ತಿದ್ದವರು ಯಾರು? ಉಸ್ತುವಾರಿ ಯಾರು? NIA, IB? ಇದು ಅವರ ವೈಫಲ್ಯವಲ್ಲವೇ?" ಎಂದು ಸಿದ್ದರಾಮಯ್ಯ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಹೇಳಿದರು.

ಇದೇ ವೇಳೆ ಬಾಂಬ್ ಸ್ಫೋಟವನ್ನು ನಾನು ಬೆಂಬಲಿಸುವುದಿಲ್ಲ, ನಾನು ಅದನ್ನು ಖಂಡಿಸುತ್ತೇನೆ. ಆದರೆ ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಶಿವಕುಮಾರ್ ಕೂಡ ಬಿಜೆಪಿ ಟ್ವೀಟ್ ಸಮರವನ್ನು ಟೀಕಿಸಿದ್ದು, ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಕರ್ನಾಟಕದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

SCROLL FOR NEXT