ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ 
ರಾಜಕೀಯ

ಲೋಕಸಭಾ ಚುನಾವಣೆ: ವಾರದಲ್ಲಿ ಸೀಟು ಹಂಚಿಕೆ ಅಂತಿಮ, ಕೋಲಾರ-ಮಂಡ್ಯದಿಂದ ಪ್ರಚಾರ ಆರಂಭ; ದೇವೇಗೌಡ

Manjula VN

ಬೆಂಗಳೂರು: ಜೆಡಿಎಸ್‌ ಮತ್ತು ಬಿಜೆಪಿ ಮಧ್ಯೆ ಲೋಕಸಭಾ ಕ್ಷೇತ್ರಗಳ ಹಂಚಿಕೆಯ ಚರ್ಚೆ ಅಂತಿಮ ಹಂತದಲ್ಲಿದ್ದು, ವಾರದೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೋಲಾರ-ಮಂಡ್ಯದಿಂದ ಪಕ್ಷ ಪ್ರಚಾರ ಪ್ರಾರಂಭಿಸಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್'ಡಿ.ದೇವೇಗೌಡ ಅವರು ಸೋಮವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀಟು ಹಂಚಿಕೆ ವಿಚಾರದ ಬಗ್ಗೆ ಈಗಾಗಲೇ ಬಿಜೆಪಿ ನಾಯಕರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಬಹುಶಃ ಇನ್ನೊಮ್ಮೆ ಕೂತು ಚರ್ಚೆ ಮಾಡಿದರೆ ಅಲ್ಲಿಗೆ ಎಲ್ಲಾ ಅಂತಿಮ ಆಗುತ್ತದೆ ಎಂದು ಹೇಳಿದರು.

‘ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಜೆಡಿಎಸ್‌ ನಾಯಕರ ಅಭಿಪ್ರಾಯ ಕೇಳಬಹುದು. ಆಗ ಅಭಿಪ್ರಾಯವನ್ನು ಹಂಚಿಕೊಳ್ಳುತ್ತೇವೆ. ಮೈತ್ರಿ ಧರ್ಮವನ್ನು ನಾವು ಪಾಲಿಸುತ್ತೇವೆ. ಎಲ್ಲ ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಪೂರಕವಾಗಿ ಬಿಜೆಪಿ ಜತೆ ಸೇರಿ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು.

ಇದೇ ವೇಳೆ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಸಿಗುತ್ತವೆ ಎಂಬುದು ಸೀಟು ಹಂಚಿಕೆಯಲ್ಲಿ ನಿರ್ಧಾರವಾಗಲಿದೆ. ಕುಮಾರಸ್ವಾಮಿ ಸ್ಪರ್ಧಿಸಬೇಕೆ? ಬೇಡವೆ? ಎಂಬುದನ್ನು ಸೀಟು ಹಂಚಿಕೆ ಬಳಿಕ ನಿರ್ಧಾರ ಮಾಡಲಾಗುವುದು’ ಎಂದರು.

‘ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತು ಮಾಧ್ಯಮಗಳಲ್ಲಿ ಅನಗತ್ಯ ಚರ್ಚೆ ನಡೆಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷ ಬಲಿಷ್ಠವಾಗಿದ್ದು, ಸಂಘಟನೆ ಚೆನ್ನಾಗಿದೆ. ಆದಷ್ಟು ಬೇಗ ಮಂಡ್ಯದಲ್ಲಿ ಪಕ್ಷದ ಸಮಾವೇಶ ಮಾಡುತ್ತೇವೆ’ ಎಂದು ಹೇಳಿದರು.

‘ಒಂದಷ್ಟು ಜನರು ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಮನಸ್ಸಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಹಾಗೆ ಹೇಳಿಕೆ ನೀಡಲು ಅವರು ಸ್ವತಂತ್ರರು. ನನಗೆ ವಯಸ್ಸಾಗಿರಬಹುದು. ನಾನೇನೂ ಸುಮ್ಮನೆ ಕೂರುವುದಿಲ್ಲ’ ಎಂದರು.

ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರು ಕೋಲಾರ ಜಿಲ್ಲೆಯವರು. ಇದೇ 14 ಅಥವಾ 16ರಂದು ಕೋಲಾರದಲ್ಲಿ ಮಹಿಳಾ ಸಮಾವೇಶ ನಡೆಸಲಾಗುವುದು. ಅಲ್ಲಿಂದಲೇ ಜೆಡಿಎಸ್‌ನ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಕೋಲಾರದಲ್ಲಿ ನಮ್ಮ ಶಕ್ತಿ ಹೆಚ್ಚಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ, ನೀತಿ ಸಂಹಿತೆ ಯಾವಾಗ ಬೇಕಾದರೂ ಜಾರಿಯಾಗಬಹುದು. ಹೀಗಾಗಿ ನಾವು ಸಿದ್ಧರಾಗಿರಬೇಕು. ಈ ಬಾರಿ ಕೋಲಾರದಿಂದಲೇ ನಮ್ಮ ಲೋಕಸಭಾ ಪ್ರಚಾರ ಆರಂಭವಾಗಲಿದ್ದು, ನಮ್ಮ ಶಕ್ತಿಯನ್ನೂ ಸಾಬೀತುಪಡಿಸಬೇಕಾಗಿದೆ ಎಂದು ಹೇಳಿದರು.

SCROLL FOR NEXT