Anant Kumar Hegde
Anant Kumar Hegde 
ರಾಜಕೀಯ

'400 ಸ್ಥಾನ ಗೆದ್ರೆ ಸಂವಿಧಾನ ತಿದ್ದುಪಡಿ': ಸಂಸದ Ananth Kumar Hegde ಹೇಳಿಕೆ ವೈಯಕ್ತಿಕ ಅಭಿಪ್ರಾಯ, ಪಕ್ಷದ ನಿಲುವಲ್ಲ: BJP ಸ್ಪಷ್ಟನೆ

Srinivasamurthy VN

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Loksabha Election 2024) 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂಬ ಉತ್ತರಕನ್ನಡ ಸಂಸದ ಅನಂತ್​ಕುಮಾರ್ ಹೆಗಡೆ (Anantkumar Hegde) ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಕುರಿತು ಬಿಜೆಪಿ ಸ್ಪಷ್ಟನೆ ನೀಡಿದೆ.

ಜಿಲ್ಲೆಯ ಸಿದ್ದಾಪುರದ ಹಲಗೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗ್ಡೆ, 'ಸಂವಿಧಾನ ತಿದ್ದುಪಡಿ ಅವಶ್ಯಕತೆ ಇದೆ. ಕಾಂಗ್ರೆಸ್​​ನವರು ಸಂವಿಧಾನದಲ್ಲಿ ಬೇಡವಾದದನ್ನೆಲ್ಲ ಸೇರಿಸಿದ್ದಾರೆ. ಅದರ ತಿದ್ದುಪಡಿ ಮಾಡಬೇಕಿದೆ. ಲೋಕಸಭೆಯಲ್ಲಿ 400 ಸ್ಥಾನ ಗೆಲ್ಲಬೇಕು ಎಂದು ಪ್ರಧಾನಿ ಹೇಳಿದ್ದಾರೆ. 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು ಎಂದು ಹೇಳಿದ್ದರು.

ಈ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತವಡಿಸುತ್ತಿದ್ದಂತೆಯೇ ಈ ಕುರಿತು ಕರ್ನಾಟಕ ಬಿಜೆಪಿ ಸ್ಪಷ್ಟನೆ ನೀಡಿದೆ. ಟ್ವಿಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 'ಸಂಸದ ಅನಂತ್ ಕುಮಾರ್ ಹೆಗಡೆಯವರ ಸಂವಿಧಾನದ ಬಗ್ಗೆ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳು ಮತ್ತು ಪಕ್ಷದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ.

ಬಿಜೆಪಿ ರಾಷ್ಟ್ರದ ಸಂವಿಧಾನವನ್ನು ಎತ್ತಿಹಿಡಿಯುವ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಮತ್ತು ಅನಂತ್ ಕುಮಾರ್ ಹೆಗ್ಗಡೆಯವರ ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ವಿವರಣೆಯನ್ನು ಕೇಳುತ್ತೇವೆ ಎಂದು ಟ್ವೀಟ್ ಮಾಡಿದೆ.

ಕಾಂಗ್ರೆಸ್ ಆಕ್ರೋಶ

ಅನಂತ್ ಕುಮಾರ್ ಹೆಗ್ಡೆ ಹೇಳಿಕೆ ಕುರಿತು ಕೆಂಡಕಾರಿರುವ ಕಾಂಗ್ರೆಸ್, ಬಿಜೆಪಿ ಅಜೆಂಡಾವನ್ನು ಸಂಸದರು ಹೊರಹಾಕಿದ್ದಾರೆ ಎಂದು ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ, 'ನಾಲ್ಕೂವರೆ ವರ್ಷ ಮಲಗಿದ್ದು, ಚುನಾವಣೆಗಾಗಿ ಎದ್ದು ಬರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಎಂಬ ಕ್ರಿಮಿ ಸಂಸತ್ತಿನಲ್ಲಿ ಕರ್ನಾಟಕದ ಪರ, ತನ್ನ ಕ್ಷೇತ್ರದ ಪರ ಮಾತಾಡಿದ ಇತಿಹಾಸವೇ ಇಲ್ಲ. ದಲಿತರನ್ನು “ಬೊಗಳುವ ನಾಯಿಗಳು” ಎಂದು ಅವಮಾನಿಸಿದ್ದ ಈ ಕೋಮುಕ್ರಿಮಿಯನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಮೂಲಕ ಬಿಜೆಪಿ ಪಕ್ಷ ದಲಿತ ವಿರೋಧಿ, ಸಂವಿಧಾನ ವಿರೋಧಿ ಎಂದು ಸಾಬೀತು ಮಾಡಿದೆ.

ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವ ಈ ದೇಶದಲ್ಲಿ ರಾಜಕೀಯ ಮಾಡುವುದಕ್ಕೆ, ಅಸ್ತಿತ್ವದಲ್ಲಿ ಇರುವುದಕ್ಕೆ ಬಿಜೆಪಿಗೆ ಅರ್ಹತೆ ಇಲ್ಲ. ದಲಿತರ ವಿರುದ್ಧ, ಸಂವಿಧಾನದ ವಿರುದ್ಧ ಸದಾ ಕಿಡಿಕಾರುವ ಬಿಜೆಪಿಯನ್ನು ಈ ರಾಜ್ಯದ ಹಾಗೂ ದೇಶದ ಜನ ತಿರಸ್ಕರಿಸುವುದು ಖಚಿತ ಎಂದು ಟ್ವೀಟ್ ಮಾಡಿದೆ.

ಇನ್ನು ಈ ಹಿಂದೆ ಸಂವಿಧಾನದ ಬದಲಾವಣೆ ಮಾಡಲು ನಾವು ಬಂದಿರೋದು ಎಂಬ ಅನಂತ್​ಕುಮಾರ್ ಹೆಗಡೆ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ಮೂರು ತಿಂಗಳಿನಿಂದ ರಾಜಕೀಯ ಮುನ್ನಲೆಗೆ ಬಂದಿರೋ ಸಂಸದರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಮ್ಮ ಕ್ಷೇತ್ರದ ಪ್ರವಾಸ ಮಾಡುತ್ತಿದ್ದಾರೆ. ಈ ಬಾರಿ ತಾವು ಚುನಾವಣೆಯ ಟಿಕೆಟ್ ಆಕಾಂಕ್ಷಿ ಎಂದು ಹೇಳಿರುವ ಅನಂತ್​ಕುಮಾರ್ ಹೆಗಡೆ, ಉತ್ತರಕನ್ನಡ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.

SCROLL FOR NEXT