ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ  
ರಾಜಕೀಯ

ಈಶ್ವರಪ್ಪ ಮನವೊಲಿಸಲು ಸಮಯ ಇದೆ, ಸ್ಪರ್ಧೆಯಿಂದ ಅವರು ಹಿಂದೆ ಸರಿಯುವ ವಿಶ್ವಾಸವಿದೆ: ಪ್ರಹ್ಲಾದ್ ಜೋಶಿ

Sumana Upadhyaya

ಹುಬ್ಬಳ್ಳಿ: ಬಿಜೆಪಿಯಲ್ಲಿ ಲೋಕಸಭೆ ಟಿಕೆಟ್ ಆಕಾಂಕ್ಷಿತರ ಬಂಡಾಯ ನಾಯಕರಿಗೆ ಬಿಸಿ ತಟ್ಟಿದೆ. ಶಿವಮೊಗ್ಗದಲ್ಲಿ ಕೆ ಎಸ್ ಈಶ್ವರಪ್ಪ ಸ್ವಪಕ್ಷ ವಿರುದ್ಧವೇ ಸಿಡಿದೆದ್ದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ನಿರ್ಧರಿಸಿದ್ದಾರೆ. ಈಶ್ವರಪ್ಪ ಅವರ ಸಿಟ್ಟನ್ನು ಶಮನ ಮಾಡಿ ಪಕ್ಷೇತರವಾಗಿ ಸ್ಪರ್ಧಿಸದಂತೆ ನೋಡಿಕೊಳ್ಳುವುದು ಈಗ ಬಿಜೆಪಿ ನಾಯಕರಿಗೆ ಸವಾಲಾಗಿದೆ.

ರಾಜ್ಯ ಬಿಜೆಪಿ ನಾಯಕರು ಮತ್ತು ಈಶ್ವರಪ್ಪನವರ ಮಧ್ಯೆ ಸಂಧಾನ ಮಾಡಲು ಕೇಂದ್ರದಿಂದ ಸಂಧಾನಕ್ಕೆ ತಂಡ ಬಂದಿದೆ ಎಂದು ಹೇಳಲಾಗುತ್ತಿದೆ. ನಾಳೆ ಶಿವಮೊಗ್ಗ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಬಿಜೆಪಿ ನಾಯಕರು ಕೆಎಸ್​ ಈಶ್ವರಪ್ಪ ಅವರ ದುಂಬಾಲು ಬಿದ್ದಿದ್ದಾರೆ. ಈ ಬಗ್ಗೆ ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಈಶ್ವರಪ್ಪನವರ ಬಂಡಾಯ ಶಮನವಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದು ಖಂಡಿತ. ನಾಳೆಯ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರಬಹುದು ಎಂದರು.

ಈಶ್ವರಪ್ಪ ಮನವೊಲಿಸಲು ಬಹಳ ಸಮಯ ಇದೆ. ಮತದಾನಕ್ಕೆ 40 ದಿನ ಇದೆ, ನಾಮಿನೇಷನ್​ಗೆ 20 ದಿನ ಇದೆ. ಅಷ್ಟರಲ್ಲಿ ನಾವೆಲ್ಲ ಸರಿ ಮಾಡುತ್ತೇವೆ ಎಂದರು. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಜಗದೀಶ್ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ. ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಹೆಚ್​ಡಿ ಕುಮಾರಸ್ವಾಮಿ ಅವರು ಅಮಿತ್​ ಶಾ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಮೂರು ಕ್ಷೇತ್ರಗಳ ಟಿಕೆಟ್​ ಕೇಳುವುದು ಸಹಜ. ಅಲ್ಲಿ ಏನು ಚರ್ಚೆ ಆಗಿದೆ ಅನ್ನೋದು ಗೊತ್ತಾಗಿಲ್ಲ. ನಾನು ಕುಮಾರಸ್ವಾಮಿ ಅವರ ಜೊತೆ ಮಾತಾಡಿಲ್ಲ ಎಂದು ತಿಳಿಸಿದರು.

ಇಂದು ಚುನಾವಣೆ ಪ್ರಚಾರ ಆರಂಭ: ನಾನು ಅಧಿಕೃತವಾಗಿ ಇಂದು ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇವತ್ತು ಬಸವರಾಜ ಬೊಮ್ಮಾಯಿ ನಾವು ಸಭೆ ಮಾಡುತ್ತೇವೆ. ಮುಂಬೈ ಕರ್ನಾಟಕದಲ್ಲಿ ಎಲ್ಲ ಕ್ಷೇತ್ರ ಗೆಲ್ಲಬೇಕು. ಇವತ್ತು ಒಟ್ಟು ನಾಲ್ಕು ಸಭೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

SCROLL FOR NEXT