ಜೆ.ಸಿ ಮಾಧುಸ್ವಾಮಿ
ಜೆ.ಸಿ ಮಾಧುಸ್ವಾಮಿ 
ರಾಜಕೀಯ

ಬಿಜೆಪಿ ನಾಯಕರೊಂದಿಗಿನ ಮುನಿಸು: ಕಾಂಗ್ರೆಸ್ ನತ್ತ ಮಾಧುಸ್ವಾಮಿ ಒಲವು!

Shilpa D

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ರಣಕಹಳೆ ಮೊಳಗಿಸಿದೆ, ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಶೀಘ್ರದಲ್ಲೆ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಇದೆ. ಮಾಧುಸ್ವಾಮಿ 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ನ ಸಿಬಿ ಸುರೇಶ್‌ಬಾಬು ವಿರುದ್ಧ ಸೋತಿದ್ದರು. 2018ರಲ್ಲಿ ಇದೇ ಕ್ಷೇತ್ರದಿಂದ ಸುರೇಶ್ ಬಾಬು ಅವರನ್ನು ಮಾಧುಸ್ವಾಮಿ ಸೋಲಿಸಿದ್ದರು.

ಚಿಕ್ಕನಾಯಕನಹಳ್ಳಿಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮಾಧುಸ್ವಾಮಿ ಈ ಹಿಂದೆ ಜನತಾ ದಳದಲ್ಲಿದ್ದವರು. ಬಿಎಸ್ ಯಡಿಯೂರಪ್ಪ ಅವರ ಕೆಜೆಪಿ ಸೇರಿ ನಂತರ ಬಿಜೆಪಿ ಪಾಳಯಕ್ಕೆ ತೆರಳಿದ್ದರು. ಅವರು 2023 ರ ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡಿದ್ದಾರೆ ಮತ್ತು ಅವರ ದುಸ್ಥಿತಿಗೆ ಪಕ್ಷದ ನಾಯಕತ್ವವನ್ನು ದೂಷಿಸಿದ್ದಾರೆ.

2023ರಲ್ಲಿ ತಮ್ಮನ್ನು ಸೋಲಿಸಿದ್ದು ಕಾಂಗ್ರೆಸ್‌ನ ಕಿರಣ್ ಕುಮಾರ್ ಎಂದು ಮಾಧುಸ್ವಾಮಿ ಆರೋಪಿಸಿದ್ದರು. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರ ಆಪ್ತರು ಎನ್ನಲಾದ ಲಿಂಗಾಯತರಾದ ಕಿರಣ್ ಕುಮಾರ್ ಅವರು ಸುಮಾರು 50 ಸಾವಿರ ಮತಗಳನ್ನು ಪಡೆದಿದ್ದು ಲಿಂಗಾಯತ ಮತ ವಿಭಜನೆಯಾಗಲು ಜೆಡಿಎಸ್ ನ ಬಾಬು ಸುಮಾರು 10,000 ಮತಗಳಿಂದ ಗೆಲ್ಲಲು ನೆರವಾದರು. ಮಾಧುಸ್ವಾಮಿ ಕಾಂಗ್ರೆಸ್ ಸೇರುವುದರಿಂದ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ, ತುಮಕೂರು ಗ್ರಾಮಾಂತರ, ತುಮಕೂರು ನಗರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಹೆಚ್ಚುವ ನಿರೀಕ್ಷೆಯಿದೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದಿಂದ ವಿ.ಸೋಮಣ್ಣ ಕಣಕ್ಕಿಳಿದಿದ್ದು, ಕಾಂಗ್ರೆಸ್‌ ಮುದ್ದಹನುಮೇಗೌಡ ಮುಖಾಮುಖಿಯಾಗಲಿದ್ದಾರೆ. ಸೋಮಣ್ಣ ಲಿಂಗಾಯತರಾಗಿದ್ದರೂ ಬಹುಸಂಖ್ಯಾತರಾಗಿರುವ ನೊಳಂಬ ಲಿಂಗಾಯತರಲ್ಲದ ಕಾರಣ ಈ ಬೆಳವಣಿಗೆ ಬಿಜೆಪಿಯಲ್ಲಿ ಅಸಮಾಧಾನ ತರಬಹುದು.

ಸಂಸದ ಜಿ.ಎಸ್.ಬಸವರಾಜ್ ನಂತರ ತುಮಕೂರಿನಲ್ಲಿ ಬಿಜೆಪಿ ಟಿಕೆಟ್‌ಗೆ ನೊಳಂಬರನ್ನು ಪರಿಗಣಿಸಿಲ್ಲ. 2023ರ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ತಮ್ಮ ಮತ್ತೊಬ್ಬ ಹಿರಿಯ ನಾಯಕ ಮಾಧುಸ್ವಾಮಿ ಸೋಲನುಭವಿಸಿದಾಗಿನಿಂದ ನೊಳಂಬರಿಗೆ ನಾಯಕರಿಲ್ಲದಂತಾಗಿದೆ.

ಮಾಧುಸ್ವಾಮಿ ಅವರಂತಹ ಪ್ರಮುಖ ನೊಳಂಬ ನಾಯಕರು ಕಾಂಗ್ರೆಸ್ ಸೇರುವುದು ಪಕ್ಷಕ್ಕೆ ಆಸ್ತಿಯಾಗಬಹುದು ಎಂದು ತುಮಕೂರಿನವರೇ ಆದ ರಾಜಕೀಯ ವಿಶ್ಲೇಷಕ ಬಿ.ಎಸ್.ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT