ಹಾಸನ: ಹಾಸನ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಾಡಿರುವ ಆರೋಪ ನಿರಾಧಾರ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಶುಕ್ರವಾರ ಹೇಳಿದ್ದಾರೆ.
ಅರಸೀಕೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜಣ್ಣ, ದೇವಗೌಡ ಅವರು ಯಾವುದೇ ವ್ಯಕ್ತಿ ಅಥವಾ ಯಾವುದೇ ಸಂಸ್ಥೆಯ ವಿರುದ್ಧ ದೂರು ನೀಡಬಹುದು, ಆದರೆ, ಆ ದೂರು ನಿಜವಾಗಿರಬೇಕು. ಸುಳ್ಳು ಆರೋಪ ಹೊರಿಸಿ ಹಿರಿಯ ಅಧಿಕಾರಿಗಳ ವರ್ಚಸ್ಸು ಹಾಳು ಮಾಡುವ ಅಭ್ಯಾಸ ದೇವೇಗೌಡ ಅವರಿಗಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಯಾವುದೇ ಜಿಲ್ಲಾಧಿಕಾರಿಯ ಕರ್ತವ್ಯವಾಗಿದೆ. ಸತ್ಯಭಾಮಾ ಕೂಡ ಅದನ್ನೇ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಇದೇ ವೇಳೆ ಪ್ರಶ್ನಿಸಿದರು.
ದೇವೇಗೌಡ ಅವರು ಅವಕಾಶವಾದಿ ರಾಜಕಾರಣಿಯಾಗುತ್ತಿದ್ದಾರೆ, 2019ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದರು. ಕೇವಲ 3 ಸ್ಥಾನಕ್ಕಾಗಿ ದೇವೇಗೌಡ ಅವರು ತಮ್ಮ ಜಾತ್ಯಾತೀತತೆ ವಿಚಾರದಲ್ಲಿ ರಾಜಿ ಮಾಡಿಕೊಂಡಿರುವುದು ದುರಾದೃಷ್ಟಕರ ಸಂಗತಿ ಎದು ತಿಳಿಸಿದರು.
ದೇವೇಗೌಡ ಅವರ ದೂರಿನ ಆಧಾರದ ಮೇಲೆ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಬಾರದು, ಏಕೆಂದರೆ ಸತ್ಯಭಾಮಾ ಸಾಮಾನ್ಯ ಜನರ ಹಿತಾಸಕ್ತಿಗಾಗಿ ಕೆಲಸ ಮಾಡುವ ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ ಎಂದು ತಿಳಿಸಿದರು.
ಬಳಿಕ ಜೆಡಿಎಸ್ ಅಭ್ಯರ್ಥಿ ಪರ ಪ್ರೀತಂ ಗೌಡ ಪ್ರಚಾರ ಕುರಿತ ಪ್ರಶ್ನಗೆ ಉತ್ತರಿಸಿ, ಈ ಚುನಾವಣೆ ಪ್ರೀತಂ ಅವರಿಗೂ ಕೂಡ ಮಹತ್ವದ್ದಾಗಿದ್ದು, ಪ್ರಚಾರ ಕುರಿತು ಪ್ರೀತಂ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಕಾದು ನೋಡೋಣ ಎಂದು ಹೇಳಿದರು.