ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ IANS
ರಾಜಕೀಯ

ಚಂದ್ರಗುತ್ತಿ ದೇವಾಲಯದ ಗಂಟೆ ಬಾರಿಸಲು ಸಿದ್ದ: ಬಿ.ವೈ.ರಾಘವೇಂದ್ರ ಸವಾಲು ಸ್ವೀಕರಿಸಿದ ಕೆ.ಎಸ್.ಈಶ್ವರಪ್ಪ

Manjula VN

ಶಿವಮೊಗ್ಗ: ಸ್ವಾಮೀಜಿಗಳಿಗೆ ನೋವುಂಟು ಮಾಡಿದ್ದೇನೆ ಎಂದು ಈಶ್ವರಪ್ಪ ಅವರು ಚಂದ್ರಗುತ್ತಿ ದೇವಾಲಯದಲ್ಲಿ ಗಂಟೆ ಬಾರಿಸಬೇಕೆಂಬ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಹಾಕಿದ ಸವಾಲನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಸ್ವೀಕಾರ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದುವರೆಗೆ ದೇವರ ಬಳಿ ಗಂಟೆ ಬಾರಿಸುವುದು, ದೀಪ ಹಚ್ಚುವುದನ್ನು ಇಂತಹ ವಿಚಾರದಲ್ಲಿ ನಾನು ಮಾಡಿಲ್ಲ. ಬಿ ವೈ ರಾಘವೇಂದ್ರ ಹಾಗೂ ಅವರ ಅಪ್ಪನಿಗೆ ಸುಳ್ಳು ಹೇಳುವುದೇ ಕೆಲಸವಾಗಿದೆ. ನಾನು ಕಾಂತೇಶನಿಗೆ ಟಿಕೆಟ್ ಕೊಡಿಸುವುದಾಗಿ ಯಡಿಯೂರಪ್ಪ ಹೇಳಿಲ್ವಾ ಎಂಬುದರ ಬಗ್ಗೆ ಅವರು ಬಂದು ಗಂಟೆ ಹೊಡೆಯುತ್ತಾರಾ ಎಂದು ಪ್ರಶ್ನಿಸಿದರು.

ಸ್ವಾಮೀಜಿಗಳಿಗೆ ರಾಘವೇಂದ್ರ ಹಾಗೂ ಅವರ ಬೆಂಬಲಿಗರು ನೋವುಂಟು ಮಾಡಿದ್ದಾರೆ. ಬಿ ವೈ ರಾಘವೇಂದ್ರ ಅವರು ಗಂಟೆ ಬಾರಿಸಲು ಸಿದ್ದ ಎಂದಿದ್ದಾರೆ. ನನಗೆ ಈ ರೀತಿಯಲ್ಲಿ ಗಂಟೆ ಬಾರಿಸುವ ಕುರಿತು ನಂಬಿಕೆ ಇಲ್ಲ. ಆದರೂ ಸಹ ನಾನು ಗಂಟೆ ಬಾರಿಸಲು ಬರುತ್ತೇನೆ. ರಾಘವೇಂದ್ರ ಹಾಗೂ ಆತನ ಕಡೆಯವರು ಸ್ವಾಮೀಜಿಗಳಿಗೆ ನೋವುಂಟು ಮಾಡಿಲ್ಲ ಎಂದು ಗಂಟೆ ಬಾರಿಸಬೇಕು. ಇದಕ್ಕೆ ದಿನ ಹಾಗೂ ಸಮಯವನ್ನು ಅವರೇ ನಿರ್ಧರಿಸಲಿ ಎಂದು ಪ್ರತಿ ಸವಾಲು ಹಾಕಿದರು.

ನಾನು ಗಂಟೆ ಬಾರಿಸಲು ಹೋಗದೇ ಇದ್ದರೂ ನಾನು ಹೇಳಿದ್ದು ಸುಳ್ಳು ಎಂದು ಭಾವಿಸುತ್ತಾರೆ. ಇದರಿಂದ ನಾನು ಗಂಟೆ ಬಾರಿಸಲು ಸಿದ್ದ. ಚಂದ್ರಗುತ್ತಿ ಅಲ್ಲ, ಅಯೋಧ್ಯೆಗೂ ಹೋಗಿ ಗಂಟೆ ಬಾರಿಸಲು ಸಿದ್ದ. ಗಂಟೆ ಬಾರಿಸುವ ವಿಚಾರವನ್ನು ಅವರು ಮರೆತರೆ ನಾನು ಮರೆಯಲು ಸಿದ್ದ ಎಂದು ತಿಳಿಸಿದರು.

ಇದೇ ವೇಳೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಯಡಿಯೂರಪ್ಪ ನನಗ ಮೋಸ ಮಾಡಿ, ಯಾವ ಮುಖ ಇಟ್ಟುಕೊಂಡು ಬರುತ್ತಾರೆ. ಹಠ ಹಿಡಿದುಕೊಂಡು ಶೋಭಾಗೆ ಟಿಕೆಟ್ ಕೊಡಿಸುತ್ತಾರೆ. ಅದೇ ರೀತಿ ಹಠ ಹಿಡಿದುಕೊಂಡು ಕಾಂತೇಶ್​ಗೆ ಟಿಕೆಟ್ ಕೊಡಿಸಬೇಕಿತ್ತು. ನನಗೂ ಶೆಟ್ಟರ್ ಇಬ್ಬರಿಗೂ ಚುನಾವಣೆಯಲ್ಲಿ ನಿಲ್ಲಬೇಡಿ. ನಾನು ಅವರು ಹೇಳಿದಂತೆ ಕೇಳಿದೆ, ಶೆಟ್ಟರ್ ಪಕ್ಷ ಬಿಟ್ಟು ಹೋಗಿದ್ರು, ಅದೇ ಯಡಿಯೂರಪ್ಪ ಶೆಟ್ಟರ್​ ಅವರನ್ನ ಮತ್ತೆ ಪಕ್ಷಕ್ಕೆ ಕರೆ ತಂದಿದ್ದಾರೆ ಎಂದರು.

ಯಡಿಯೂರಪ್ಪ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ಸಾರೆ. ಅವರ ಮಗ ಗೆಲ್ಲಲು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಶಿಕಾರಿಪುರದಲ್ಲಿ 60 ಸಾವಿರ ಮತಗಳಿಂದ 12 ಸಾವಿರ ಮತಗಳಿಗೆ ಇಳಿಸಿದ್ದಾರೆ. ಮುಂದೆ ಎಷ್ಟಾದರೂ ಹಣ ಸುರಿಯಲಿ, ಆಗ ಎಷ್ಟು ಮತ ಬರುತ್ತದೆ ಎಂದು ನೋಡೋಣ. ಹಿಂದೆ ಅನೇಕ ಹಿರಿಯರು, ಮುಖಂಡರು ಹೇಳಿದಾಗ ನಾನು ಅವರ ಮಾತನ್ನು ಕೇಳಲಿಲ್ಲ. ಈಗ ಅವರ ಮಾತು ನನಗೆ ಸತ್ಯ ಎನ್ನುವುದು ಗೊತ್ತಾಗುತ್ತಿದೆ ಎಂದು ಹೇಳಿದರು.

ಜನ ಅಭಿವೃದ್ದಿಗೆ ಮತ ಹಾಕುತ್ತಾರೆ, ಅದೇ ರೀತಿ ಯಡಿಯೂರಪ್ಪ ಮೋಸದ ಬಗ್ಗೆ ತಿಳಿದು ಮತ ಹಾಕಿ ನನಗೆ ಗೆಲ್ಲಿಸುತ್ತಾರೆ. ಈ ಚುನಾವಣೆಯಲ್ಲಿ ಜನ ಧರ್ಮಕ್ಕೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಅತಿ ಹೆಚ್ಚು ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರದವರು ನನ್ನ ಜೊತೆಗೆ ಇದ್ದಾರೆ. ನಾನು ಇಬ್ಬರಕ್ಕಿಂತ ಚುನಾವಣೆಯಲ್ಲಿ ಬಹಳ ಮುಂದೆ ಇದ್ದೇನೆ. ಬೇಡವಾದ ಚರ್ಚೆಗಳಿಗೆ ನಾನು ಉತ್ತರ ನೀಡಲ್ಲ. ಆಯನೂರು ಮಂಜುನಾಥ ಪ್ರಶ್ನೆಗೂ ಉತ್ತರ ನೀಡಲ್ಲ ಎಂದರು.

SCROLL FOR NEXT