ಮೈಸೂರು: ವಿಧಾನಪರಿಷತ್‌ಗೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಟಿಕೆಟ್‌ಗಾಗಿ ಹಲವು ಹಿರಿಯ ನಾಯಕರು ಹಾಗೂ ಹೊಸ ಮುಖಗಳು ಒತ್ತಡ ಹೇರುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ಶಿವಕುಮಾರ್‌ಗೆ ಹೊಸ ತಲೆನೋವು ಶುರುವಾಗಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಮುಕ್ತಾಯಗೊಂಡಿದ್ದು, ಎರಡೂ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಶೇ.65ರಷ್ಟು ಸಚಿವರು ಹಾಗೂ ಹಿರಿಯ ನಾಯಕರ ಮಕ್ಕಳು ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಆದರೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅವಕಾಶ ಕಳೆದುಕೊಂಡವರು ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಹೇರುತ್ತಿದ್ದು, ಕ್ಷೇತ್ರ, ಹಿರಿತನ, ಪಕ್ಷದ ಸೇವೆ, ಜಾತಿ ಇತ್ಯಾದಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಸಿದ್ದು ಹಾಗೂ ಡಿಕೆಶಿಗೆ ಕೊಂಚ ಸವಾಲು ಎದುರಾಗಿದೆ.
12 ಸ್ಥಾನಗಳ ಪೈಕಿ ಎಂಟು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳಿದ್ದು, ಉಳಿದ 4 ಸ್ಥಾನಗಳನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಾಲಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಪಕ್ಷದ ಮುಖ್ಯ ವಕ್ತಾರ ರಮೇಶ್ ಬಾಬು, ಮಾಜಿ ಸಭಾಪತಿ ಯು.ಆರ್.ಸುದರ್ಶನ್, ಹಿರಿಯ ನಾಯಕ ಬಿ.ಎಲ್.ಶಂಕರ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ವಿಜಯ್ ಮುಳಗುಂದ, ಚಿತ್ರದುರ್ಗದ ಮಂಜುನಾಥ್, ಮಂಗಳೂರಿನ ಐವನ್ ಡಿಸೋಜಾ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಮಾಜಿ ಶಾಸಕ ಎನ್.ಸಂಪಂಗಿ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್. ಮೈಸೂರು-ಕೊಡಗು ಲೋಕಸಭಾ ಚುನಾವಣೆ ಟಿಕೆಟ್ ಕೈ ತಪ್ಪಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ವರುಣಾ ಕ್ಷೇತ್ರದಿಂದ ಎಸ್ಟಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ವೀಣಾ ಅಚ್ಚಯ್ಯ, ಮಾಜಿ ಮೇಯರ್ ಅಯೂಬ್ ಖಾನ್ ಮತ್ತು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ವಿಧಾನಪರಿಷತ್'ನ 12 ಸ್ಥಾನಗಳ ಅವಧಿ ಜೂನ್.17ಕ್ಕೆ ಮುಕ್ತಾಗೊಳ್ಳುವುದರಿಂದ, ಈ ಸ್ಥಾನಗಳಿಗೆ ಸ್ಪರ್ಧಿಸಲು ಲಾಬಿ ಶುರುವಾಗಿದೆ. ಬಹುತೇಕ ಆಕಾಂಕ್ಷಿಗಳು ಲೋಕಸಭೆ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೈ ಪಾಳಯದಲ್ಲಿ ಅಸಮಾಧಾನಗಳು ಭುಗಿಲೇಳುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನಗೊಳ್ಳಲಿದೆ ವಿಪಕ್ಷಗಳು ಭವಿಷ್ಯ ನುಡಿಯುತ್ತಿವೆ.
ಈ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ತಂದೆಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಂಡ ಹಿನ್ನೆಲೆಯಲ್ಲಿ ಯತೀಂದ್ರ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡುವುದು ಬಹುತೇಕ ಖಚಿತವೆಂದು ಮೂಲಗಳು ತಿಳಿಸಿವೆ.