ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಕರ್ನಾಟಕ ಸರ್ಕಾರ ಬರೆದ ಪತ್ರ ಕೇಂದ್ರ ಸರ್ಕಾರಕ್ಕೆ ತಡವಾಗಿ ಪತ್ರ ಬಂದಿದೆ ಎಂಬ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ್ವರು, ನಾನು 15 ದಿನಗಳ ಹಿಂದೆಯೇ ಪತ್ರ ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು. ಒಂದು ವೇಳೆ ಪತ್ರ ಬರೆದಿದ್ದೇ ತಡವಾದರೂ ಕ್ರಮ ಯಾಕೆ ತೆಗೆದುಕೊಂಡಿಲ್ಲ. ಸುಮ್ಮನೆ ಕಾಲ ಕಳೆಯುವುದನ್ನು ಬಿಟ್ಟು ಪಾಸ್‌ಪೋರ್ಟ್ ರದ್ದು ಮಾಡಲಿ'' ಎಂದು ಆಗ್ರಹಿಸಿದರು.
ಬಳಿಕ ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ ಸಾವಿನ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿದ ಬಗ್ಗೆ ಪ್ರತಿಕ್ರಿಯಿಸಿ, ರಾಕೇಶ್ ಸಿದ್ದರಾಮಯ್ಯ ಸತ್ತು 8 ವರ್ಷ ಆಗಿದೆ. ಈಗ ಆ ವಿಚಾರ ಪ್ರಸ್ತಾಪಿಸುವುದು ಮೂರ್ಖತನ. ರಾಜಕೀಯಕ್ಕೋಸ್ಕರ ಹೀಗೆ ಮಾಡುತ್ತಿದ್ದಾರೆ. ಅವರು 2016ರಲ್ಲೇ ತೀರಿಕೊಂಡಿದ್ದು, ಅದಕ್ಕೂ ಈ ಪ್ರಕರಣಕ್ಕೂ ಸಂಬಂಧವೇನು? ಎಂದು ಪ್ರಶ್ನಿಸಿದರು.
ಅತ್ಯಾಚಾರಕ್ಕಿಂತ ವಿಡಿಯೋ ಹಂಚಿದ್ದು, ದೊಡ್ಡ ಅಪರಾಧ ಎನ್ನುತ್ತಿರುವುದಕ್ಕೂ ತಿರುಗೇಟು ನೀಡಿ, ಅಂತಹ ಅಪರಾಧ ಅಥವಾ ಯಾವುದಾದರೂ ಸೆಕ್ಷನ್ ಭಾರತೀಯ ಕಾನೂನಿನಲ್ಲಿ ಇದೆಯಾ. ಅದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಹಾಗಂತ ವಿಡಿಯೋ ಹಂಚಿಕೆ ಮಾಡಿರುವುದು ಸರಿ ಎಂದು ನಾನು ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಇದೇ ವೇಳೆ, ಈಗ ಪರಿಷತ್ ಚುನಾವಣೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಪರಿಷತ್ ಸ್ಥಾನವನ್ನು ಎಸ್ಸಿ ಹಾಗೂ ಎಸ್ಟಿಗೆ ಕೊಡಬೇಕು. ಆದರೆ, ನಮ್ಮ ಕಷ್ಟ ಅರ್ಥವಾಗುವುದಿಲ್ಲ ಎಂದ ಸಿಎಂ, ಈ ಮೂಲಕ ಪರಿಷತ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ಸಿದ್ದರಾಮಯ್ಯ ಪತ್ರ ಕುರಿತು ಪ್ರತಿಕ್ರಿಯೆ ನೀಡಿದ್ದ ಜೈಶಂಕರ್ ಅವರು, ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಮಾಡಿದ ಮನವಿಯನ್ನು ಮೇ 21 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವೀಕರಿಸಿದ್ದು, ಪಾಸ್ ಪೋರ್ಟ್ ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಕರ್ನಾಟಕದ ಮನವಿ ಸ್ವೀಕರಿಸಿದ ತತಕ್ಷಣ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ. ಮೇ. 23 ರಿಂದಲೇ ಪಾಸ್ ಪೋರ್ಟ್ ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಆದರೆ, ಪಾಸ್ ಪೋರ್ಟ್ ಕಾಯ್ದೆಯ ಅನ್ವಯವೇ ಪಾಸ್ ಪೋರ್ಟ್ ವಶಪಡಿಸಿಕೊಳ್ಳಬೇಕಾಗಿದೆ. ಪಾಸ್ ಪೋರ್ಟ್ ವಶಪಡಿಸಿಕೊಳ್ಳಲು ನ್ಯಾಯಾಲಯ ಅಥವಾ ಪೊಲೀಸರ ಮನವಿ ಅಗತ್ಯವಿದೆ ಎಂದು ಹೇಳಿದ್ದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಿಲುಕಿ, ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಪತ್ರ ಬರೆದ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್‌ಪೋರ್ಟ್ ರದ್ದತಿಯ ಪ್ರಕ್ರಿಯೆ ಆರಂಭಿಸಿದ್ದು, ಈ ಸಂಬಂಧ ಮೊದಲಿಗೆ ಪ್ರಜ್ವಲ್ ರೇವಣ್ಣನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.