ಬೆಂಗಳೂರು: ವಿಧಾನ ಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ಹಿರಿಯ ನಾಯಕರ ಸಲಹೆ ಪಡೆಯಬೇಕೆಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಪರಿಷತ್ ನ 11 ಸ್ಥಾನಗಳಿಗೆ ಜೂ.13 ರಂದು ಚುನಾವಣೆ ನಡೆಯುತ್ತಿದ್ದು, ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ಮಾಡುವುದಕ್ಕೆ ಇಂದು ಸಿಎಂ-ಡಿಸಿಎಂ ದೆಹಲಿಗೆ ತೆರಳಿದ್ದಾರೆ.
ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ನಮ್ಮಂತಹ ಪಕ್ಷದ ಹಿರಿಯ ನಾಯಕರ ಸಲಹೆಯನ್ನು ಪಡೆದರೆ ಅದು ಸೂಕ್ತವಾಗಿರಲಿದೆ. ಯಾರ ಸಲಹೆಯನ್ನೂ ಪಡೆಯದೇ ಅವರೇ ನಿರ್ಧಾರ ತೆಗೆದುಕೊಂಡರೆ, ನನ್ನ ಪ್ರಕಾರ ಅದು ಸರಿಯಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಹಿರಿತನ ಮತ್ತು ಅನುಭವ ಇರುವವರು ಮತ್ತು ಸಂಪರ್ಕ ಹೊಂದಿರುವವರ ಸಲಹೆ ಪಡೆಯಬೇಕು. ಅವರು ನಮ್ಮೊಂದಿಗೆ ಚರ್ಚಿಸಬೇಕು,’’ ಎಂದು ಪರಮೇಶ್ವರ ಹೇಳಿದರು.
ನಾನಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ ನನ್ನಂತಹ ಹಿರಿಯರು ಹಾಗೂ ಅನುಭವ ಇರುವವರು ಹಾಗೂ ಪಕ್ಷದ ಸ್ಥಾನ ಅಲಂಕರಿಸಿರುವವರು ಇದ್ದಾರೆ, ಅವರ ಸಲಹೆ, ಅಭಿಪ್ರಾಯ ಪಡೆದರೆ ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ ಎಂದು ಗೃಹ ಸಚಿವರು ಹೇಳಿದ್ದಾರೆ.
ಎಂಎಲ್‌ಸಿ ಅಭ್ಯರ್ಥಿಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಶಿವಕುಮಾರ್ ಅವರ ಅಭಿಪ್ರಾಯ ಕೇಳಿದ್ದಾರೆಯೇ ಅಥವಾ ಯಾವುದಾದರೂ ಹೆಸರನ್ನು ಶಿಫಾರಸು ಮಾಡಿದ್ದಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದ್ದರು. ಟಿಕೆಟ್ ನೀಡುವಾಗ ಪ್ರದೇಶ ಮತ್ತು ಜಾತಿಯಂತಹ ಅಂಶಗಳನ್ನು ಪರಿಗಣಿಸಿ ಹಲವು ಸಚಿವರು ಸಲಹೆ ನೀಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಈ ಬಗ್ಗೆ ಚರ್ಚೆಯಾಗಬೇಕು, ಇಬ್ಬರೂ (ಸಿಎಂ ಮತ್ತು ಡಿಸಿಎಂ) ಏಕಪಕ್ಷೀಯವಾಗಿ ತೀರ್ಮಾನಿಸಬಾರದು, ನಮ್ಮ ಸಲಹೆ ಪಡೆಯಬೇಕು. ಜಿಲ್ಲೆ ಮತ್ತು ಜಾತಿವಾರು ಪರಿಗಣಿಸಿ." ಪಕ್ಷಕ್ಕಾಗಿ ದುಡಿದು ಕಟ್ಟಿರುವವರನ್ನು, ಸಂಘಟನೆಯ ಪರವಾಗಿ ನಿಂತ ಸಮುದಾಯಗಳನ್ನು ಗುರುತಿಸಬೇಕು ಎಂದು ಹೇಳಿದ್ದಾರೆ.
ಗೃಹ ಸಚಿವರ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಖಂಡಿತವಾಗಿಯೂ ಪಕ್ಷದ ಹಿರಿಯ ನಾಯಕರ ಸಲಹೆ ಪಡೆಯುತ್ತೇವೆ ಎಂದು ಹೇಳಿದ್ದಾರೆ. ''300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಎಲ್ಲ ವರ್ಗದವರೂ ಇದ್ದಾರೆ, ಏಳು ಸ್ಥಾನಕ್ಕೆ ಎಲ್ಲ ವರ್ಗದವರಿಗೂ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ, ಹಾಲಿ ಸದಸ್ಯರೂ ಇದ್ದಾರೆ, ಎಲ್ಲರೂ ಪಕ್ಷಕ್ಕಾಗಿ ದುಡಿದವರು, ದುಡಿಯದವರೇ ಇಲ್ಲ. ಅವರಲ್ಲಿ ಕೆಲವರು ಬ್ಲಾಕ್ ಮಟ್ಟದಲ್ಲಿ, ಕೆಲವರು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹುದ್ದೆಗಳನ್ನು ಪಡೆದಿದ್ದಾರೆ ”ಎಂದು ಶಿವಕುಮಾರ್ ದೆಹಲಿಗೆ ತೆರಳುವ ಮೊದಲು ಹೇಳಿದ್ದಾರೆ.