ರಾಮಲಿಂಗಾ ರೆಡ್ಡಿ ಮತ್ತು ಆರ್.ಅಶೋಕ್ 
ರಾಜಕೀಯ

ಶಕ್ತಿ ಯೋಜನೆ ಬಗ್ಗೆ ಟೀಕೆ: ಚರ್ಚೆಗೆ ಬರುವಂತೆ ಆರ್ ಅಶೋಕ್'ಗೆ ರಾಮಲಿಂಗಾರೆಡ್ಡಿ ಆಹ್ವಾನ

ಶಕ್ತಿ ಯೋಜನೆಯು ಅಕ್ಷರಶಃ ಸಾರಿಗೆ ನಿಗಮಗಳಿಗೆ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಏಕೆಂದರೆ ಅಂಕಿಅಂಶಗಳು ಇದನ್ನು ಸಾಬೀತುಪಡಿಸುತ್ತವೆ. ನಾವು ನಿಮ್ಮಗಳ ರೀತಿ ಗಾಳಿಯಲ್ಲಿ ಗುಂಡು ಹಾರಿಸೊಲ್ಲ.

ಬೆಂಗಳೂರು: ತಮಗೆ ಹಾಗೂ ತಮ್ಮ ಪಕ್ಷದವರಿಗೆ ಟ್ಟೀಟ್ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂಬುದನ್ನು ಜಗಜಾಹ್ಹೀರು ಮಾಡಿದ್ದೀರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್​ ಅಶೋಕ್​ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಕಿಡಿಕಾರಿದ್ದಾರೆ.

ಶಕ್ತಿ ಯೋಜನೆ ಕುರಿತು ಟೀಕೆ ಮಾಡಿದ ಆರ್​ ಅಶೋಕ್​ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿರುವ ಸಚಿವರು, ಶಕ್ತಿ ಯೋಜನೆಯು ಅಕ್ಷರಶಃ ಸಾರಿಗೆ ನಿಗಮಗಳಿಗೆ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಏಕೆಂದರೆ ಅಂಕಿಅಂಶಗಳು ಇದನ್ನು ಸಾಬೀತುಪಡಿಸುತ್ತವೆ. ನಾವು ನಿಮ್ಮಗಳ ರೀತಿ ಗಾಳಿಯಲ್ಲಿ ಗುಂಡು ಹಾರಿಸೊಲ್ಲ, ಅಂಕಿಅಂಶಗಳೇ ನಮ್ಮ‌ ಅಭಿವೃದ್ಧಿಗೆ ಹಾಗೂ ಸಾಧನೆಗೆ ಮಾನದಂಡ. ಸಾರಿಗೆ ಸಂಸ್ಥೆಗಳಲ್ಲಿ ಕಳೆದ‌ 5 ವರ್ಷದ ತಮ್ಮ ಅಧಿಕಾರಾವಧಿಯಲ್ಲಿ ಯಾವ ಯಾವ ಸಾಧನೆಗಳನ್ನು ಮಾಡಿದ್ದೀರ ಎಂಬ ಪಟ್ಟಿ ಕೊಟ್ಟರೆ ನಾವು ನಿಮ್ಮೊಡನೆ ನೇರಾನೇರ ಚರ್ಚಿಸಲು ಬಯಸುತ್ತೇವೆ‌ ಎಂದು ಹೇಳಿದ್ದಾರೆ.

ಸಾರಿಗೆ ಸಂಸ್ಥೆಗಳನ್ನು ಅಧೋಗತಿ ತಂದು ನಿಲ್ಲಿಸಿರುವುದು ತಮ್ಮ ಅಧಿಕಾರಾವಧಿಯಲ್ಲಿ ಎಂಬ ಕಟುವಾದ ಸತ್ಯ ನಿಮಗೆ‌ ತಿಳಿದಿದ್ದರೂ ಸಹ ಜಾಣ ಕುರುಡು ತೋರುವ ನಿಮ್ಮ ಬಗ್ಗೆ ನನಗೆ ಕನಿಕರವಿದೆ. ನಮ್ಮ ಸರ್ಕಾರದ‌ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳ ಆದಾಯದಲ್ಲಿ‌ ಗಣನೀಯ ವೃದ್ಧಿಯಾದರೂ ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಲು ಸಾಧ್ಯವಾಗಿಲ್ಲದಿರುವುದು ತಮ್ಮ ಸರ್ಕಾರದ ಕೊಡುಗೆ. ಶಕ್ತಿ ಯೋಜನೆಯಿಂದ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ 84 ಲಕ್ಷದಿಂದ 1.08 ಕೋಟಿಗೆ ಏರಿಕೆ ಆಗಿದೆ. ಆದಾಯದಲ್ಲಿ ಗಣನೀಯ ವೃದ್ಧಿ ಆಗಿದೆ. ನಾನು ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ,ಆದಾಯವೇ ಬೇರೆ ಲಾಭವೇ ಬೇರೆ.

ತಮ್ಮ ಬಿ.ಜೆ.ಪಿ ಪಕ್ಷದ ಆಡಳಿತದ ಐದು ವರ್ಷಗಳಲ್ಲಿ ಯಡಿಯೂರಪ್ಪ‌ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ನಷ್ಟದಲ್ಲಿಟ್ಟು ಹೋಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ‌ ಹೊರತುಪಡಿಸಿ ಬೇರೆ ಯಾವುದೇ‌ ಸಾರಿಗೆ ನಿಗಮಗಳಿಗೆ ಬಸ್‌ಗಳ ಸೇರ್ಪಡೆಯೇ ಮಾಡದೆ, ಡಕೋಟ ಬಸ್ಸುಗಳನ್ನು ಕಾರ್ಯಾಚರಣೆ‌ ಮಾಡಲು ಬಿಟ್ಟು ಹೋಗಿದ್ದೀರಾ. ನಮ್ಮ ಸರ್ಕಾರ 6200 ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಕಳೆದೊಂದು ವರ್ಷದಲ್ಲಿಯೇ 3400 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ. ಡಕೋಟಾ ಬಸ್ಸುಗಳನ್ನು‌ ಪುನಶ್ಚೇತನ‌ ಮಾಡುವ ಕಾರ್ಯವನ್ನು ಸಹ ಕೈಗೆತ್ತಿಕೊಂಡು 1300 ಬಸ್ಸುಗಳ ಪುನಶ್ಚೇತನ ‌ಕಾರ್ಯ‌ಮಾಡಿದ್ದೇವೆ. ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ‌ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ (ನಿವೃತ್ತಿ ಇನ್ನಿತರೆ ಕಾರಣಗಳಿಂದ) ಒಂದೇ ಒಂದು‌ ನೇಮಕಾತಿ ಮಾಡಿಲ್ಲ.

ನಮ್ಮ ಸರ್ಕಾರ ಬಂದ ಕೂಡಲೇ 9000 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಈಗಾಗಲೇ 5800 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ವಿವಿಧ ಹಂತದಲ್ಲಿವೆ. ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ತಿಂಗಳ ವೇತನ ಪೂರ್ಣ ಪಾವತಿಯಾಗದೆ , ಅರ್ಧವೇತನ ,ಕೆಲವೊಮ್ಮೆ ಆ ವೇತನವೂ ತಿಂಗಳ ಕೊನೆಯವರೆಗೂ, ಒಮ್ಮೊಮ್ಮೆ ಮುಂದಿನ ತಿಂಗಳವರೆಗೂ ಪಾವತಿಯಾಗುತ್ತಿತ್ತು ಈ ಬಗ್ಗೆ ತಮಗೆ ಮಾಹಿತಿ ಇಲ್ಲವೇ? *ನಮ್ಮ ಸರ್ಕಾರ ಬಂದ ಮೇಲೆ ನಿಗದಿತ ದಿನಾಂಕದಂದು ನೌಕರರಿಗೆ ವೇತನ ಪಾವತಿಯಾಗುತ್ತಿದೆ.

ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಕಾರ್ಮಿಕ‌ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಕಳೆದ ಏಳೆಂಟು ವರ್ಷಗಳಿಂದ ಬಾಕಿ ಉಳಿದಿದ್ದ 1000 ಕ್ಕೂ ಅಧಿಕ ಮೃತ ಅವಲಂಬಿತ‌ ಕುಟುಂಬಗಳಿಗೆ ಅನುಕಂಪ ಆಧಾರದಲ್ಲಿ ಹುದ್ದೆ ನೀಡಲಾಗಿದೆ ಕಳೆದ‌ 5 ವರ್ಷದಲ್ಲಿ ತಮ್ಮ ಸರ್ಕಾರ ಸಂಪೂರ್ಣ ನಿಲ್ಲಿಸಿದ್ದ ಪ್ರಕ್ರಿಯೆ ಇದು. ತಮ್ಮ ಸರ್ಕಾರವು ಬಿಟ್ಟು ಹೋಗಿದ್ದ ರೂ.5900 ಕೋಟಿ‌ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ‌ ಡೀಸೆಲ್ ಹಣ, ಸಿಬ್ಬಂದಿಗಳ ಭವಿಷ್ಯ ನಿಧಿ , ಖರೀದಿ ಸಾಮಾಗ್ರಿಗಳ ಹಣ ಸೇರಿ ಎಲ್ಲಾ ಬಾಕಿ ಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ.

ನಾನು ಎಲ್ಲಿಯೂ ಕೂಡ, ಯಾವುದೇ ವೇದಿಕೆಯಲ್ಲಾಗಲೀ/ ಮಾಧ್ಯಮಕ್ಕಾಗಲೀ ಶಕ್ತಿ ಯೋಜನೆ ನಡೆಸಲು ಸಾರಿಗೆ ಸಂಸ್ಥೆಗಳು ಕಷ್ಟಪಡುತ್ತಿವೆ ಎಂಬ ಹೇಳಿಕೆಯನ್ನೇ ನೀಡಿಲ್ಲ* ಈ ಬಗ್ಗೆ ಮಾಧ್ಯಮಗಳಿಗೂ ಸಹ ಈ ರೀತಿಯ ಸುದ್ದಿಗಳನ್ನು ಪ್ರಕಟಿಸುವ ಮುನ್ನ ನಮ್ಮಿಂದ ನಿಖರವಾದ ಮಾಹಿತಿಯನ್ನು ಪಡೆದು ಪ್ರಕಟಿಸುವಂತೆ ತಿಳಿಸಲಾಗಿದೆ. ತಮಗೆ ಜನರನ್ನು ದಾರಿ ತಪ್ಪಿಸಲು ದಿನಕ್ಕೊಂದು ವಿಷಯ ಬೇಕು. ಈ ಖಯಾಲಿ ಬಹಳ ಹಾನಿಕಾರಕವಾದದ್ದು ಸಾಧ್ಯವಾದರೆ ಇದನ್ನು ಸಮಾಜದ ಹಿತದೃಷ್ಟಿಯಿಂದ ಬದಲಿಸಿಕೊಳ್ಳಲು ಪ್ರಯತ್ನಿಸಿ. ಶಕ್ತಿ ಯೋಜನೆ ಮಹಿಳಾ ಸಬಲೀಕರಣದ ಯೋಜನೆ ಅದನ್ನು ಗೌರವಿಸುವ ಕೆಲಸ ಮಾಡಿ, ಇನ್ನಾದರೂ ಈ ಯೋಜನೆ ನಿರಾತಂಕವಾಗಿ ನಡೆಯಲು ಅವಕಾಶ ಮಾಡಿಕೊಟ್ಟು, ಮಹಿಳೆಯರಿಗೆ ತಲುಪುತ್ತಿರುವ ಈ ಯಶಸ್ವಿ ಯೋಜನೆಯಲ್ಲಿ ತಮ್ಮದೊಂದು ಅಳಿಲು ಸೇವೆ ಇರುವಂತಾಗಲಿ ಎಂದು ಆಶಿಸುತ್ತೇನೆಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಅವರಂತಹ ಸುಳ್ಳುಬುರುಕ ಮುಖ್ಯಮಂತ್ರಿ ನಮ್ಮ ರಾಜ್ಯದ ಮಾತ್ರವಲ್ಲ ಇಡೀ ದೇಶದ ಇತಿಹಾಸದಲ್ಲೇ ಮತ್ತೊಬ್ಬರಿರಲಿಕ್ಕಿಲ್ಲ. ಒಂದು ಕಡೆ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ಲಾಭವಾಗಿದೆ ಎಂದು ಜಾಹೀರಾತು ಕೊಡುತ್ತಾರೆ. ಮತ್ತೊಂದು ಕಡೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಅವರು ಶಕ್ತಿ ಯೋಜನೆಯನ್ನ ನಡೆಸುವುದು ಸಾರಿಗೆ ಇಲಾಖೆಗೆ ತುಸು ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ.

ಸ್ವಾಮಿ ಸಿದ್ದರಾಮಯ್ಯ ಅವರೇ, ವಕ್ಫ್ ಆಸ್ತಿ ಎಂದು ರೈತರಿಗೆ ನೋಟಿಸು ಕೊಡುತ್ತಿರುವುದು ತಮ್ಮ ಸೂಚನೆ ಮೇರೆಗೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳುತ್ತಾರೆ. ಆದರೆ, ನೀವು ನೋಡಿದರೆ ನೋಟಿಸು ವಾಪಸ್ಸು ಪಡೆಯುತ್ತೇವೆ ಎನ್ನುತ್ತೀರಿ. ಇತ್ತ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಾಗಿದೆ ಎನ್ನುತ್ತೀರಿ, ಆದರೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶಕ್ತಿ ಯೋಜನೆ ನಡೆಸುವುದು ಕಷ್ಟ ಎನ್ನುತ್ತಾರೆ.

ತಮ್ಮ ಎಡಬಿಡಂಗಿ ಸಂಪುಟದಲ್ಲಿ ಎಲ್ಲ ಮಂತ್ರಿಗಳೂ ಹೀಗೆನಾ? ಅಥವಾ ನಿಮ್ಮ ಮತ್ತು ನಿಮ್ಮ ಸಂಪುಟ ಸದಸ್ಯರ ಮಧ್ಯೆ ಏನಾದರೂ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ತಮ್ಮ ಸಂಪುಟ ಸಚಿವರ ಮೇಲೆ ಹಿಡಿತ ಸಾಧಿಸಲಾಗದ ತಾವು ರಾಜ್ಯದ ಆಡಳಿತ ಹೇಗೆ ನಡೆಸುತ್ತೀರಿ? ತಮ್ಮಂತಹ ಅಸಮರ್ಥ ಮುಖ್ಯಮಂತ್ರಿಯಿಂದ ರಾಜ್ಯಕ್ಕೆ ನಯಾ ಪೈಸೆ ಲಾಭವಿಲ್ಲ. ದಯವಿಟ್ಟು ರಾಜೀನಾಮೆ ಕೊಟ್ಟು ತೊಲಗಿ ಎಂದು ಕಿಡಿಕಾರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT