ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ನಿವೇಶನ ಹಗರಣದ ತಾರ್ಕಿಕ ಅಂತ್ಯ ಕುರಿತಾದ ಕುತೂಹಲ ಹೆಚ್ಚುತ್ತಿರುವ ಬೆನ್ನಲ್ಲೇ, ರಾಜಕೀಯ ಸಂಘರ್ಷದ ವಾತಾವರಣವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಸೇರಿಗೆ ಸವ್ವಾಸೇರು ಎಂಬಂತೆ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರ ಬಗ್ಗುಬಡಿಯಲು ಕಾಂಗ್ರೆಸ್ ಮುಂದಾಗಿದೆ.
ಇದರಂತೆ ಬಿಜೆಪಿ ನಾಯಕರ ವಿರುದ್ಧದ ಹಳೇ ಪ್ರಕರಣಗಳ ಕೆದಕಲು ಆಡಳಿತಾರೂಢ ಕಾಂಗ್ರೆಸ್ ಪಕ್ಷ ರಣತಂತ್ರ ರೂಪಿಸುತ್ತಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷದ ಕಾನೂನು ವಿಭಾಗ ಮೂರು ಸುತ್ತಿನ ಸಭೆ ನಡೆಸಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ನೇತೃತ್ವದಲ್ಲಿ ಈ ಸಬೆ ನಡೆದಿದ್ದು, ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್, ಪ್ರತಿಪಕ್ಶ ನಾಯಕ ಆರ್.ಅಶೋಕ್ ಹಾಗೂ ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿ ವಿರುದ್ದಧ ಡಿನೋಟಿಫಿಕೇಶನ್ ಪ್ರಕರಣ ಕುರಿತು ಚರ್ಚೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಬಿಜೆಪಿ ಹಿರಿಯ ಮುಖಂಡ, ಎಂಎಲ್‌ಸಿ ಸಿಟಿ ರವಿ ಸೇರಿದಂತೆ ಬಿಜೆಪಿಯ 22 ಪ್ರಬಲ ನಾಯಕರ ವಿರುದ್ಧದ ಭೂ ವಿವಾದ ಪ್ರಕರಣಗಳನ್ನು ಬೆಳಕಿಗೆ ತರಲಾಗುವುದು ಎಂದು ಕಾನೂನು ಘಟಕದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಸೋಮವಾರ ಕೂಡ ಕಾಂಗ್ರೆಸ್ ನಾಯಕರು ಪೊನ್ನಣ್ಣ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸಿದ್ದು, ಬಿಜೆಪಿ ನಾಯಕರ ವಿರುದ್ಧದ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಏಕೆ ವಿಫಲವಾಗಿದೆ ಎಂಬುದೂ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ