ಸಂಗ್ರಹ ಚಿತ್ರ 
ರಾಜಕೀಯ

ನಾಯಕತ್ವ ಬದಲಾವಣೆ: ಹೈಕಮಾಂಡ್ ಮಧ್ಯಪ್ರವೇಶ; ಗೌಪ್ಯ ಸಭೆ ನಡೆಸುತ್ತಿರುವ ನಾಯಕರಿಗೆ ಖಡಕ್ ವಾರ್ನಿಂಗ್!

ಖರ್ಗೆಯವರ ಸೂಚನೆ ಬೆನ್ನಲ್ಲೇ ವೇಣುಗೋಪಾಲ್ ಅವರು ಶಿವಕುಮಾರ್ ಅವರಿಗೆ ಕರೆ ಮಾಡಿ, ಕಾವೇರಿಯಲ್ಲಿರುವ ಸಿದ್ದರಾಮಯ್ಯನವರ ನಿವಾಸದಲ್ಲಿ ಭೇಟಿಯಾದರು.

ಬೆಂಗಳೂರು: ಮುಡಾ ಹಗರಣ, ವಾಲ್ಮೀಕಿ ಹಗರಣ ಪ್ರಕರಣಗಳು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದು, ಇದರ ನಡುವಲ್ಲೇ ಹಿರಿಯ ನಾಯಕರ ಗೌಪ್ಯ ಸಭೆಗಳು ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳು ಹೆಚ್ಚಾಗುವಂತೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿದ್ದು, ಸಚಿವರು ಹಾಗೂ ಪಕ್ಷದ ನಾಯಕರಿಗೆ ಕಠಿಣ ಸೂಚನೆ ನೀಡಿದೆ.

ನಾಯಕತ್ವ ಬದಲಾವಣೆ ವಿಚಾರ ಗುಸುಗುಸು ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆ ಕುರಿತು ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರದಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಖರ್ಗೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರಿಗೆ ಹಾನಿ ನಿಯಂತ್ರಿಸುವಂತೆ ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಖರ್ಗೆಯವರ ಸೂಚನೆ ಬೆನ್ನಲ್ಲೇ ವೇಣುಗೋಪಾಲ್ ಅವರು ಶಿವಕುಮಾರ್ ಅವರಿಗೆ ಕರೆ ಮಾಡಿ, ಕಾವೇರಿಯಲ್ಲಿರುವ ಸಿದ್ದರಾಮಯ್ಯನವರ ನಿವಾಸದಲ್ಲಿ ಭೇಟಿಯಾದರು.

ಮೂವರೂ ಚರ್ಚೆ ನಡೆಸಿದ ಬಳಿಕ, ತಪ್ಪು ಸಂದೇಶ ರವಾನೆಯಾಗುವುದರಿಂದ ಸತೀಶ್ ಸೇರಿದಂತೆ ಯಾವುದೇ ಸಚಿವರು ಪಕ್ಷದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.

ಸತೀಶ್ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುತ್ತಿರುವುದು ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಹಾನಿಯುಂಟು ಮಾಡುತ್ತಿದೆ. ಸಿದ್ದರಾಮಯ್ಯ ಅವರ ಎರಡೂವರೆ ವರ್ಷ ಅವಧಿ ಮುಗಿಯುವವರೆಗೆ ಸಿಎಂ ಸ್ಥಾನ ಬದಲಾವಣೆಗೆ ಅವಕಾಶವಿಲ್ಲ. ಮುಡಾ ಪ್ರಕರಣದಲ್ಲಿ ಇಡಿ ಅವರನ್ನು ಬಂಧಿಸಲು ಸಾಧ್ಯವಿಲ್ಲ' ಎಂದು ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಇಬ್ಬರಿಗೂ ಆಪ್ರರಾಗಿರುವ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ರಾಜ್ಯದಲ್ಲಿ ಮುಡಾ ಪ್ರಕರಣ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಗುಮಾನಿ ಹುಟ್ಟುವಂತಹ ರಾಜಕೀಯ ಚಟುವಟಿಕೆ ಶುರುವಾಗಿವೆ.

ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಡಾ. ಎಚ್ ಎಚ್‌.ಸಿ. ಮಹದೇವಪ್ಪ ಸೇರಿ ತ್ರಿಮೂರ್ತಿ ಸಚಿವರ ಸರಣಿ ಸಭೆಗಳಿಂದ ಸರ್ಕಾರ ಹಾಗೂ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ,

ಸಿದ್ದರಾಮಯ್ಯ ಅವರ ಆಪ್ತ ಸತೀಶ್ ಇಬ್ಬರು ದಲಿತ ಮುಖಂಡರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಬೆಂಗಳೂರು, ತುಮಕೂರು ಮತ್ತು ಮೈಸೂರಿನ್ಲಿ ಮಾತುಕತೆ ನಡೆಸಿದ್ದರು. ಇದು ಸಿದ್ದರಾಮಯ್ಯನವರ ಸಚಿವ ಸಂಪುಟ ಸನ್ನಿಹಿತ ಬದಲಾವಣೆಗೆ ಸಜ್ಜಾಗುತ್ತಿದೆ ಎಂಬ ಸೂಚನೆ ನೀಡಿತ್ತು.

ಸತೀಶ್ ಅವರ ಈ ಭೇಟಿ, ಶಾಸಕರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ದಲಿತ ಮುಖಂಡರ ಭೇಟಿಯಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿತ್ತು. ಬಳಿಕ ಚಿಕ್ಕಮಗಳೂರು ಶಾಸಕ ಎಚ್‌ಡಿ ತಮ್ಮಯ್ಯ ಅವರನ್ನೂ ಬುಧವಾರ ಭೇಟಿ ಮಾಡಿರುವುದು, ಚರ್ಚೆಗಳು ಹೆಚ್ಚಾಗುವಂತೆ ಮಾಡಿತ್ತು.

ವೀರಶೈವ ಲಿಂಗಾಯತರಾದ ತಮ್ಮಯ್ಯ ಅವರು ಅಹಿಂದ ಮತಗಳ ಧ್ರುವೀಕರಣದ ಮೂಲಕ ಒಕ್ಕಲಿಗರಾದ ಸಿ.ಟಿ.ರವಿ ಅವರನ್ನು ಸೋಲಿಸಿದ್ದರು. ಸಿದ್ದರಾಮಯ್ಯನವರ ಜೊತೆ ಇರುವ ಕೆಲವು ಶಾಸಕರು ಕೂಡ ಸತೀಶ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದವು. ಈ ಬೆಳವಣಿಗೆ ಸಿಎಂ ಹುದ್ದೆಗೆ ಪ್ರಮುಖ ಆಕಾಕ್ಷಿಯಾಗಿರುವ ಡಿಕೆ.ಶಿವಕುಮಾರ್ ಅವರನ್ನು ವಿಚಲಿತಗೊಳಿಸಿತ್ತು, ಹೀಗಾಗಿ ಹೈಕಮಾಂಡ್ ಮಧ್ಯಸ್ಥಿಕೆಗೆ ಕೋರಿದ್ದರು ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರ ಆಪ್ತ ಬಳಗದ ನಾಯಕತ್ವ ಬದಲಾವಣೆ ಪ್ರಸ್ತಾವನೆಯನ್ನು ಒಪ್ಪಿಕೊಳ್ಳಲು ಡಿಕೆ.ಶಿವಕುಮಾರ್ ಅವರು ಸಿದ್ಧರಿಲ್ಲ. ಒಪ್ಪಂದಂತೆ 2.5 ವರ್ಷಗಳ ಬಳಿಕ ಸಿದ್ದರಾಮಯ್ಯ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿ, ಅಧಿಕಾರ ಹಸ್ತಾಂತರಿಸಬೇಕೆಂದು ಡಿಕೆ ಶಿವಕುಮಾರ ಬಯಸುತ್ತಿದ್ದಾರೆ. ಒಂದು ವೇಳೆ ಈಗಲೇ ನಾಯಕತ್ವ ಬದಲಾವಣೆಯಾಗಿದ್ದೇ ಆದರೆ, ದಲಿತ ನಾಯಕರೊಬ್ಬರು ಸಿಎಂ ಆದರೆ, ಅಧಿಕಾರ ಹಸ್ತಾಂತರ ಕಠಿಣವಾಗಬಹುದು ಎಂಬುದು ಅವರ ಅಲೋಚನೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷದ ಹಿಡಿತವನ್ನು ಮರಳಿ ಪಡೆಯಲು ಸಿದ್ದರಾಮಯ್ಯ ಅವರ ಬೆಂಬಲದ ಅಗತ್ಯವಿರುವುದರಿಂದ ಮತ್ತು ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಿರಿಯ ಸಹೋದರ ಡಿ.ಕೆ.ಸುರೇಶ್ ಅವರನ್ನು ಪ್ರಸ್ತಾಪಿಸುವ ಚಿಂತನೆ ಇರುವುದರಿಂದ ಸಿದ್ದರಾಮಯ್ಯ ಅವರು ಸಿಎಂ ಆಗಿ ಮುಂದುವರೆಯಬೇಕೆಂದು ಡಿಕೆ.ಶಿವಕುಮಾರ್ ಅವರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT