ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಸೋಮವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೊಂದು ಕಾನೂನು, ನನಗೊಂದು ಕಾನೂನಾ?...ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ನಾವೂ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದೆವು. ಇದೀಗ ನೀವೂ ರಾಜೀನಾಮೆ ನೀಡಿ, ತನಿಖೆ ಎದುರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದರು.
ನನ್ನ ಮೇಲೆ ಆರೋಪ ಕೇಳಿ ಬಂದಾಗಲೂ ರಾಜೀನಾಮೆ ನೀಡಿದ್ದೆ. ಸಿದ್ದರಾಮಯ್ಯ ಕೂಡ ಈಗ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ನನ್ನ ಮೇಲೆ ತನಿಖೆ ಆಗಿತ್ತು. ಕ್ಲಿನ್ ಚಿಟ್ ಕೂಡ ಸಿಕ್ಕಿತ್ತು. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಆರೋಪ ಕೇಳಿ ಬಂದಿದೆ. ಈಗೇಕೆ ರಾಜೀನಾಮೆ ನೀಡುತ್ತಿಲ್ಲ?... ನಿಮಗೊಂದು ಕಾನೂನು ನನಗೊಂದು ಕಾನೂನು ಇದೆಯಾ? ನನ್ನ ವಿರುದ್ಧ ನೀವೇ ಹೋರಾಟ ಮಾಡಿದ್ದಿರಿ. ಸಿಎಂ ಡಬಲ್ ಸ್ಟ್ಯಾಂಡ್ ತಕೋಬೇಡಿ. ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ. ಕ್ಲಿನ್ ಚಿಟ್ ಸಿಕ್ಕರೆ ಮತ್ತೆ ಸಿಎಂ ಆಗಿ ಎಂದು ಹೇಳಿದರು.
ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಂಪತಿ ಆಗಾಗ ಭೇಟಿ ನೀಡುತ್ತಿದ್ದು, ಸವದತ್ತಿ ಯೆಲ್ಲಮ್ಮ ದೇವಸ್ಥಾನಕ್ಕೂ ಭೇಟಿ ನೀಡುತ್ತಿದ್ದಾರೆ. ಪಾರ್ವತಮ್ಮನವರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಮೇಲಿಂದ ಮೇಲೆ ಚಾಮುಂಡೇಶ್ವರಿ ಬೆಟ್ಟಕ್ಕೆ ಪೂಜೆ ಸಲ್ಲಿಸುವ ಕೆಲಸ ಆಗುತ್ತಿದೆ. ನಿಮ್ಮ ಶ್ರೀಮತಿಯವರು ಸಾಕಷ್ಟು ಪೂಜೆ ಮಾಡಿಕೊಂಡು ಬಂದಿದ್ದಾರೆ. ನೀವು ಕೂಡ ಪ್ರಾಮಾಣಿಕವಾಗಿ ಪೂಜೆ ಸಲ್ಲಿಸಿ, ಕುಂಕುಮ ಹಾಕಿಕೊಳ್ಳುವ ಕೆಲಸ ಮಾಡಿದ್ದೀರಾ. ಆದರೆ, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಸಿದ್ದರಾಮಯ್ಯ, ದೇವಸ್ಥಾನ ಧ್ವಂಸ ಮಾಡುವವರ ಮೇಲಿನ ಕೇಸ್ ಹಿಂಪಡೆದಿರುವುದು ದುರಾದೃಷ್ಟಕರ ಸಂಗತಿ ಎಂದು ತಿಳಿಸಿದರು.
ಅಲ್ಪಸಂಖ್ಯಾತರ ಓಲೈಕೆಯೇ ಈ ನಿರ್ಧಾರಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್‌ನ ವೋಟ್ ಬ್ಯಾಂಕ್ ರಾಜಕಾರಣವನ್ನು ಪೋಷಿಸಲು ದೇಶವಿರೋಧಿಗಳು ಮತ್ತು ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಆರೆಸ್ಸೆಸ್ ಅನ್ನು ಟೀಕಿಸುತ್ತಾರೆ. ದೇಶದ ರಕ್ಷಣೆ ದೇಶ ಸೇವೆ ಮಾಡುತ್ತಿರುವುದು ಆರ್ ಎಸ್ಎಸ್. ಈ ಆರ್'ಎಸ್ಎಸ್ ಬಗ್ಗೆ ಟೀಕೆ ಮಾಡಿ ಮಾಡಿ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸಂಗೊಳ್ಳಿ ರಾಯಣ್ಣ ಚನ್ನಮ್ಮ ಬ್ರಿಗೇಡ್ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಂತಿಮವಾದ ತೀರ್ಮಾನ ಇನ್ನು ಆಗಿಲ್ಲ. ಬಾಗಲಕೋಟೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಈ ಸಮಾವೇಶಕ್ಕೆ ಮೃತ್ಯುಂಜಯ ಸ್ವಾಮಿ ಸೇರಿದಂತೆ ಹಲವರು ಬರುತ್ತಿದ್ದಾರೆ ಎಂದು ಹೇಳಿದರು.