ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಕನಕಪುರದ ಮಾಜಿ ಸಂಸದೆ ತೇಜಸ್ವಿನಿ ಗೌಡ, ಒಕ್ಕಲಿಗ ನಾಯಕಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಪತ್ರ ಬರೆದು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಟಿಕೆಟ್‌ಗೆ ತಮ್ಮನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ. ಬಿಜೆಪಿಯಿಂದ ಎಂಎಲ್‌ಸಿಗೆ ರಾಜೀನಾಮೆ ನೀಡಿದ ನಂತರ ತೇಜಸ್ವಿನಿ ಕಾಂಗ್ರೆಸ್‌ಗೆ ಮರಳಿದ್ದಾರೆ.
ತೇಜಸ್ವಿನಿ ಅವರ ರಾಜಕೀಯ ಪಯಣ ಅದ್ಭುತವಾಗಿದೆ, 2004 ರಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಕನಕಪುರ ಲೋಕಸಭೆ ಕ್ಷೇತ್ರದಲ್ಲಿ ಸೋಲಿಸಿದ ನಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸಿದರು. 1,20,000 ಮತಗಳ ಭಾರೀ ಅಂತರದಿಂದ ದೇವೇಗೌಡರಿನ್ನು ಸೋಲಿಸಿದರು. ಈ ಕ್ಷೇತ್ರದೊಳಗಿನ ನಿರ್ಣಾಯಕ ವಿಧಾನಸಭಾ ಕ್ಷೇತ್ರವಾದ ಚನ್ನಪಟ್ಟಣ ಅವರ ಭರ್ಜರಿ ಗೆಲುವಿಗೆ ಪ್ರಮುಖ ಕಾರಣವಾಗಿದೆ. TNIE ಯೊಂದಿಗೆ ಮಾತನಾಡಿದ ತೇಜಸ್ವಿನಿ ಅವರು 2004 ರಲ್ಲಿ ಚನ್ನಪಟ್ಟಣದಿಂದ ಪಡೆದ ಅಗಾಧ ಬೆಂಬಲವನ್ನು ನೆನಪಿಸಿಕೊಂಡರು. ಆದರೆ 2009 ರಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ಹೋರಾಟವು ತಾವು ಅಂದು ಕೊಂಡ ರೀತಿಯಲ್ಲಿ ನಡೆಯಲಿಲ್ಲ. ಡಿಲಿಮಿಟೇಶನ್, ಪಕ್ಷದ ಒಳಜಗಳ ಮತ್ತು ಪಕ್ಷಾಂತರಗಳಿಂದಾಗಿ, ತಮಗೆ ಸೋಲುಂಟಾಯಿತು ಎಂದರು.
2004 ರ ತಮ್ಮ ಗೆಲುವಿಗೆ ಕಾರಣರಾಗಿದ್ದ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಮತ್ತೊಮ್ಮೆ ಅವರನ್ನು ಬೆಂಬಲಿಸುತ್ತಿದ್ದಾರೆ. ಮಂಗಳವಾರ ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಂತರ, ಅವರ ವೃತ್ತಿಜೀವನದಲ್ಲಿ ಮತ್ತೊಂದು ರಾಜಕೀಯ ಅಧ್ಯಾಯಕ್ಕೆ ವೇದಿಕೆ ಸಿದ್ಧವಾಗಿದೆ.
ಒಂದು ವೇಳೆ ತೇಜಸ್ವಿನಿ ಗೆಲುವು ಸಾಧಿಸಿದರೆ ಕಾಂಗ್ರೆಸ್‌ನಲ್ಲಿ ಶಿವಕುಮಾರ್ ಅವರ ನಾಯಕತ್ವವನ್ನು ಗಟ್ಟಿಗೊಳಿಸುತ್ತದೆ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. ನಂತರ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ವೇಣುಗೋಪಾಲ್ ಅವರೊಂದಿಗೆ ಗೌಡರು ಕಾಣಿಸಿಕೊಂಡರು. ಪೈಪೋಟಿ ಹೆಚ್ಚಿರುವುದರಿಂದ ಪ್ರತಿಪಕ್ಷಗಳು ಸ್ಪರ್ಧೆಯನ್ನು ಹಗುರವಾಗಿ ಪರಿಗಣಿಸುತ್ತಿಲ್ಲ. ತೇಜಸ್ವಿನಿ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದರೆ, ಪಕ್ಷಾಂತರಗೊಂಡ ತೇಜಸ್ವಿನಿ ವಿರುದ್ಧ ಸೇಡು ತೀರಿಸಿಕೊಳ್ಳಲು ಬಿಜೆಪಿ ಸಿದ್ಧವಾಗಿದೆ ಎಂದು ಎನ್‌ಡಿಎ ಮೂಲಗಳು ಸ್ಪಷ್ಟಪಡಿಸಿವೆ. ಕಾಂಗ್ರೆಸ್‌ನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ರಘುನಂದನ್ ರಾಮಣ್ಣ ವಿರುದ್ಧ ತೇಜಸ್ವಿನಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
ವಿರೋಧ ಪಾಳಯದಲ್ಲಿ ಬಿಜೆಪಿ ಎಂಎಲ್ ಸಿ ಸಿ.ಪಿ.ಯೋಗೇಶ್ವರ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಲೋಕಸಭೆಗೆ ಚುನಾಯಿತರಾಗುವವರೆಗೂ ಈ ಸ್ಥಾನವನ್ನು ಹೊಂದಿದ್ದ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಟಿಕೆಟ್ ಕೊಡಿಸಲು ಉತ್ಸುಕರಾಗಿದ್ದಾರೆ. ಒಂದು ವೇಳೆ ಎನ್‌ಡಿಎ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂದು ಯೋಗೇಶ್ವರ ಬುಧವಾರ ಸೂಚಿಸಿದ್ದಾರೆ.