ಹುಬ್ಬಳ್ಳಿ: ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಫೈಟ್ ಶುರುವಾಗಿದೆ. ಹೀಗಾಗಿ, ಯಾರಿಗೆ ಕೊಡಬೇಕೆನ್ನುವುದೇ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅಧಿಕಾರದಲ್ಲಿರುವುದರೊಂದಿಗೆ ಪಕ್ಷವು ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ನಾಯಕರು ನಿರೀಕ್ಷಿಸುತ್ತಿದ್ದರೆ, ಇರುವ ಸ್ಥಾನಗಳನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಬಿಜೆಪಿ ನಿರತವಾಗಿದೆ.
ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಿದೆ.
ಧಾರವಾಡ ಸಂಸದೀಯ ಕ್ಷೇತ್ರಕ್ಕೆ ಒಳಪಡುವ ಈ ವಿಧಾನಸಭಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 36,000 ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ವಿನೋದ ಅಸೂಟಿ ಅವರು ಪ್ರಹ್ಲಾದ್ ಜೋಶಿಯವರಿಗಿಂತಲೂ 8,598 ಹೆಚ್ಚು ಮತ ಪಡೆದಿದ್ದರು. ಹೀಗಾಗಿ ಕ್ಷೇತ್ರದ ಜನ ಕಾಂಗ್ರೆಸ್ ಪರ ಹೆಚ್ಚು ಒಲವು ಹೊಂದಿದ್ದಾರೆಂದು ಹೇಳಲಾಗುತ್ತಿದ್ದು, ಇದು ಬಿಜೆಪಿ ನಿದ್ದೆ ಕೆಡಿಸಿದೆ. ಅಲ್ಲದೆ, ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಭಾರೀ ಪೈಪೋಟಿ ಎದುರಾಗುವ ಸೂಚನೆಯನ್ನೂ ನೀಡಿದೆ.
ಮುಸ್ಲಿಂ ಮತಗಳನ್ನು ಪರಿಗಣಿಸಿ ಸಾಮಾನ್ಯವಾಗಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿತ್ತು. ಆದರೆ, ಈ ಬಾರಿ ಕಾರ್ಯತಂತ್ರವನ್ನು ಬದಲಿಸಿದ್ದು, ಜೋಶಿ ವಿರುದ್ಧ ಹೆಚ್ಚು ಮತ ಪಡೆದಿದ್ದ ವಿನೋದ ಅಸೂಟಿ ಅವರನ್ನೇ ಕಣಕ್ಕಿಳಿಸಲು ಮುಂದಾಗಿದ್ದು, ಈ ಮೂಲಕ ಹೊಸ ಪ್ರಯೋಗ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.