ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ- ಜೆಡಿಎಸ್ ನಡುವೆ ಇದ್ದ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ಬಹುತೇಕ ತೆರೆ ಬಿದ್ದಿದೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಬಿಜೆಪಿಯ ನಾಯಕ ಸಿಪಿ ಯೋಗೇಶ್ವರ್ ಗೆ ಜೆಡಿಎಸ್ ನಿಂದ ಟಿಕೆಟ್ ನೀಡಿ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಲಹೆ ನೀಡಿದ್ದಾರೆ ಎಂದು ಹೇಳಿದ್ದಾರೆ.
"3 ದಿನಗಳ ಹಿಂದೆ ಜೆಪಿ ನಡ್ಡಾ ನನಗೆ ಕರೆ ಮಾಡಿದ್ದರು, ಬಿಜೆಪಿಗೆ ರಾಜೀನಾಮೆ ನೀಡಿ ಜೆಡಿಎಸ್ ಗೆ ಸೇರ್ಪಡೆಯಾಗುವಂತೆ ಸಿಪಿ ಯೋಗೇಶ್ವರ ಅವರಿಗೆ ಸೂಚನೆ ನೀಡುವುದಾಗಿ ಹೇಳಿದ್ದರು" ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಯೋಗೀಶ್ವರ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಒಪ್ಪಿಗೆ ನೀಡುವುದಾಗಿ ಜೆಪಿ ನಡ್ಡಾ ಹೇಳಿದರು ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷರು ಇನ್ನೇನು ಹೇಳುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮೈತ್ರಿ ಮುಖ್ಯವೇ ಹೊರತು ಸೀಟು ಅಲ್ಲ, "ನನಗೆ ಎನ್‌ಡಿಎ ಗೆಲ್ಲುವುದು ಬೇಕು, ನಾವು ಬಾಗಲು ಸಿದ್ಧ ಎಂದು ನಡ್ಡಾಗೆ ತಾವು ಹೇಳಿದ್ದಾಗಿ ಕುಮಾರಸ್ವಾಮಿ ಇದೇ ವೇಳೆ ತಿಳಿಸಿದ್ದಾರೆ.
ಕುಮಾರಸ್ವಾಮಿ ಹೇಳಿರುವ ಪ್ರಕಾರ ಚನ್ನಪಟ್ಟಣದಿಂದ ಜೆಡಿಎಸ್ ಅಭ್ಯರ್ಥಿಯಾಗಬೇಕು ಎಂದು ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.
ಇಂತಹ ನಾಯಕರೊಂದಿಗೆ ನನ್ನ ಸಂಬಂಧವನ್ನು ಹಾಳು ಮಾಡಿಕೊಳ್ಳಲು ನಾನು ಬಯಸುವುದಿಲ್ಲ, ಇದನ್ನು ನೀವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಹೇಳಿದರು.
ಕೇವಲ ಎರಡು (ಲೋಕಸಭಾ) ಸ್ಥಾನಗಳನ್ನು ಗೆದ್ದ ನಂತರ ಅವರು ನಮಗೆ (ಜೆಡಿ-ಎಸ್) ನೀಡಿದ ಗೌರವಕ್ಕಾಗಿ ನಾನು ಬಿಜೆಪಿಯೊಂದಿಗಿನ ನನ್ನ ಸಂಬಂಧವನ್ನು ಹಾಳು ಮಾಡಬೇಕೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ತಮ್ಮನ್ನು ಗೌರವಿಸುವವರನ್ನು ಹೊರತುಪಡಿಸಿ ಬೇರೆಯವರ ಮುಂದೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದ ಕುಮಾರಸ್ವಾಮಿ, ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿಯ ಬಗ್ಗೆ ಒಮ್ಮತಕ್ಕೆ ಬರಲು ಜನರು ಮುಂದಿನ ಮೂರು ದಿನ ಕಾಯಬೇಕು ಎಂದು ಹೇಳಿದರು.
ರಾಜ್ಯದಲ್ಲಿ ನವೆಂಬರ್ 13 ರಂದು ಬಳ್ಳಾರಿಯ ಸಂಡೂರು ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಜೊತೆಗೆ ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆಯಲಿದೆ.