ಮೈಸೂರು: ಮುಡಾ ಕೇಸು ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತು. ಸಿಎಂ ಸಿದ್ದರಾಮಯ್ಯನವರ ರಾಜಕೀಯ ಉಳಿವಿನ ಬಗ್ಗೆ ಕೂಡ ಪ್ರಶ್ನೆ ಮಾಡುವಂತೆ ಮಾಡಿತ್ತು. ಈ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯನವರು, ವರುಣಾ ಕ್ಷೇತ್ರದ ಜನರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ನಾನು ಮಾಡುವುದಿಲ್ಲ, ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ, ನಾನು ಈ ವಿಚಾರದಲ್ಲಿ ಶುದ್ಧವಾಗಿದ್ದೇನೆ, ಪ್ರಕರಣದಲ್ಲಿ ಶುದ್ಧ ಕಳಂಕರಹಿತವಾಗಿ ಹೊರಬರುತ್ತೇನೆ ಎಂದು ಹೇಳಿದ್ದಾರೆ.
ವರುಣಾ ಕ್ಷೇತ್ರದಲ್ಲಿ 501 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಿನ್ನೆ ಮಾತನಾಡಿದ್ದ ಅವರು, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಮುಖ್ಯಮಂತ್ರಿ ಹುದ್ದೆ ತೊರೆಯುವುದಿಲ್ಲ, ಬಿಜೆಪಿ-ಜೆಡಿಎಸ್ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಈಗಲೂ ನನಗೆ ಜನಬೆಂಬಲಿದೆ. ನಾನು ಕಾನೂನುಬಾಹಿರ ಅಥವಾ ಅನೈತಿಕವಾಗಿ ಏನನ್ನೂ ಮಾಡಿಲ್ಲ. ಪ್ರತಿಪಕ್ಷಗಳ ಯೋಜಿತ ರಾಜಕೀಯ ತಂತ್ರ ಇದಾಗಿದ್ದು, ನನ್ನ ಪ್ರತಿಷ್ಠೆ ಮತ್ತು ನೈತಿಕ ನಿಲುವನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದು ನಿಷ್ಪ್ರಯೋಜಕವಾಗಲಿದೆ ಎಂದರು.
ತಮ್ಮನ್ನು ಮೂರು ಬಾರಿ ಆಯ್ಕೆ ಮಾಡಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಮಾಡಿದ ವರುಣಾ ಕ್ಷೇತ್ರದ ಜನತೆಗೆ ಬಡವರ ಸೇವೆ ಮಾಡುವ ಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಾನು 42 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನಾನು ನಿಮ್ಮಿಂದ ಲಂಚ ತೆಗೆದುಕೊಂಡಿದ್ದೇನೆಯೇ ಪ್ರತಿಪಕ್ಷಗಳು ನನ್ನ ವಿರುದ್ಧ ಹೊರಿಸುತ್ತಿರುವ ಆರೋಪಗಳನ್ನು ಸಹಿಸಿಕೊಳ್ಳುತ್ತೀರಾ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.
ಮುಡಾ ಹಗರಣದ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ, ಆದರೆ ಇದು ನನ್ನ ಬಾಮೈದ ಪತ್ನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಪ್ರಕರಣವಾಗಿದೆ. ಮುಡಾ ಸ್ವಾಧೀನಪಡಿಸಿಕೊಂಡ ಭೂಮಿಗೆ ನಿವೇಶನಗಳನ್ನು ಮಂಜೂರು ಮಾಡುವುದಾಗಿದ್ದರೂ, ಈಗ ವಿರೋಧ ವ್ಯಕ್ತವಾಗಿದ್ದರಿಂದ ತಮ್ಮ ಕುಟುಂಬ ಸೈಟ್‌ಗಳನ್ನು ಹಿಂದಿರುಗಿಸಲು ನಿರ್ಧರಿಸಿತು, ನನಗೆ ಮನೆ ಇಲ್ಲ. ನಾನು ನನ್ನ ಸ್ನೇಹಿತ ಮರಿಸ್ವಾಮಿ ಎಂಬುವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದರು.
ನಾನೀಗ ಮನೆ ಕಟ್ಟಿಸುತ್ತಿದ್ದೇನೆ. ಯಡಿಯೂರಪ್ಪ, ಕುಮಾರಸ್ವಾಮಿ, ವಿಜಯೇಂದ್ರ ನನ್ನ ವಿರುದ್ಧ ಇರುವುದರಿಂದ ನಿಮ್ಮ ಆಶೀರ್ವಾದ ಬೇಕು ಎಂದರು. ಲೋಕಸಭೆ ಚುನಾವಣೆಯ ನಂತರ ಖಾತರಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂದು ಪ್ರಧಾನಿ ಮೋದಿ, ಬಿಜೆಪಿ ಮತ್ತು ಜೆಡಿಎಸ್ ನವರು ಹೇಳಿದ್ದರು ಎಂದು ನೆನಪಿಸಿಕೊಂಡರು.
ಆದರೆ ಚುನಾವಣೆಯ ನಂತರವೂ ಖಾತರಿ ಯೋಜನೆಗಳು ಮುಂದುವರಿದಿವೆ. ಕುಮಾರಸ್ವಾಮಿ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ಹಿಂದುಳಿದ ವರ್ಗಗಳ ಮುಖಂಡರೊಬ್ಬರು ಎರಡನೇ ಬಾರಿಗೆ ಸಿಎಂ ಆಗಿದ್ದಕ್ಕೆ ಈಗ ವಿರೋಧಪಕ್ಷದವರು ಅಸೂಯೆ ಪಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯವು ಕೇಂದ್ರಕ್ಕೆ ಅತಿ ಹೆಚ್ಚು ಜಿಎಸ್‌ಟಿ ಜಮಾ ಮಾಡುತ್ತಿದ್ದರೂ ಕೇಂದ್ರವು ಕರ್ನಾಟಕಕ್ಕೆ ಆರ್ಥಿಕ ನೆರವು ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಕೇಂದ್ರವು 15ನೇ ಹಣಕಾಸು ಆಯೋಗದಲ್ಲಿ ಉತ್ತರ ರಾಜ್ಯಗಳ ಪರವಾಗಿದ್ದು, ಇದರಿಂದ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಅವರು ಹೇಳಿದರು.
ಉಪಚುನಾವಣೆ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ ಎಂದರು. ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮೈಸೂರಿನಲ್ಲಿ ಮಾತುಕತೆ ನಡೆಸಿದರು. ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಒಪ್ಪಿಗೆ ನಂತರ ಹೆಸರುಗಳನ್ನು ಅಂತಿಮಗೊಳಿಸಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.