ಬೆಂಗಳೂರು: ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಗುರುವಾರ ಘೋಷಿಸಲಾಗಿದೆ. 36 ವರ್ಷದ ನಿಖಿಲ್ ಅವರು ಕಾಂಗ್ರೆಸ್‌ನ ಮಾಜಿ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಸೆಣೆಸಾಡಲಿದ್ದಾರೆ. ಯೋಗೇಶ್ವರ್ ಅವರು ಈ ವಾರದ ಆರಂಭದಲ್ಲಿ ಬಿಜೆಪಿ ಎಂಎಲ್ ಸಿಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರು.
ಮೈತ್ರಿಕೂಟದ ಪಾಲುದಾರರಾದ ಜೆಡಿಎಸ್ ಮತ್ತು ಬಿಜೆಪಿ ಸರಣಿ ಸಭೆ ನಡೆಸಿದ ನಂತರ ಅಳೆದು-ತೂಗಿ ಜೆಡಿಎಸ್ ಯುವ ಘಟಕದ ಮುಖ್ಯಸ್ಥ ನಿಖಿಲ್ ಅವರನ್ನು ಕಣಕ್ಕಿಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಿಖಿಲ್ ಕುಮಾರಸ್ವಾಮಿಗೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಇದೆ. ನೂರಕ್ಕೆ ನೂರರಷ್ಟು ನಿಖಿಲ್ ಗೆಲ್ಲುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಉಭಯ ಪಕ್ಷಗಳ ನಾಯಕರ ಜತೆ ಚರ್ಚೆ ನಡೆಸಿದ ಬಳಿಕ ಯಡಿಯೂರಪ್ಪ ನಿಖಿಲ್ ಕುಮಾರ ಸ್ವಾಮಿಯನ್ನು ಚನ್ನಪಟ್ಟಣ ಅಭ್ಯರ್ಥಿ ಎಂದು ಘೋಷಿಸಿದರು.
ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲಾ ಪ್ರಮುಖ ನಾಯಕರು ಒಟ್ಟಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬದಲಾದ ಯೋಗೇಶ್ವರ ಅವರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಪಕ್ಷಾಂತರಿಗಳ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಜೆಡಿಎಸ್ ಚನ್ನಪಟ್ಟಣ ಮುಖಂಡರ ಮತ್ತು ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ನಿಖಿಲ್ ಸ್ಪರ್ಧಿಸಲು ಬಯಸಿರಲಿಲ್ಲ, ಪಕ್ಷದ ಕಾರ್ಯಕರ್ತನನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ಬಯಸಿದ್ದರು. ಆದರೆ ಜೆಡಿಎಸ್ ಕಾರ್ಯಕರ್ತರು ನಿಖಿಲ್ ಅಭ್ಯರ್ಥಿಯಾಗಬೇಕೆಂದು ಒತ್ತಡ ಹೇರುತ್ತಿದ್ದರು ಹೀಗಾಗಿ ಅಭ್ಯರ್ಥಿಯಾಗಲು ನಿಖಿಲ್ ಮುಂದಾದರು. ಶುಕ್ರವಾರ ನಿಖಿಲ್ ನಾಮಪತ್ರ ಸಲ್ಲಿಸಲಿರುವ ಕಾರಣ ನಾನು ಚನ್ನಪಟ್ಟಣಕ್ಕೆ ಹೋಗುತ್ತೇನೆ ಮತ್ತು ಅಲ್ಲಿಯೇ ಬೀಡು ಬಿಟ್ಟು ವಿಸ್ತೃತ ಪ್ರಚಾರ ಮಾಡುತ್ತೇನೆ ಎಂದು ದೇವೇಗೌಡ ಹೇಳಿದರು.
ಚನ್ನಪಟ್ಟಣದಿಂದ ನಿಖಿಲ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಕಾರ್ಯಕರ್ತರು ಒತ್ತಡ ಹೇರಿದ್ದರು. ಈ ಹಿಂದೆ ಜೆಡಿಎಸ್ ಅಸ್ತಿತ್ವದ ಪ್ರಶ್ನೆ ಬಂದಾಗಲೆಲ್ಲ ನನ್ನ ಕುಟುಂಬದ ಸದಸ್ಯರನ್ನೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಾಗುತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದರು. ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರು 2013 ರ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಯೋಗೇಶ್ವರ ವಿರುದ್ಧ ಸೋತಿದ್ದರು. 2019 ರಲ್ಲಿ, ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸೋತರು ಮತ್ತು 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಲ್ಲಿ ಸೋಲು ಅನುಭವಿಸಿದರು.
ತಮ್ಮ ಬಾವ, ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಯೋಗೇಶ್ವರ್ ಅವರನ್ನು ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಆಫರ್ ನೀಡಿದ್ದರು ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು, ಸೀಟು ಬಿಟ್ಟುಕೊಡಲು ನಾನು ಸಿದ್ಧನಾಗಿದ್ದೆ ಎಂದು ಹೇಳಿದರು. "ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎನ್‌ಡಿಎ ಅಭ್ಯರ್ಥಿಯ ಗೆಲುವು ಹೆಚ್ಚು ಮಹತ್ವದ್ದಾಗಿರುವುದರಿಂದ ಟಿಕೆಟ್ ವಿಷಯವು ಈಗ ಅಪ್ರಸ್ತುತವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿ ನಾಯಕರು ಚನ್ನಪಟ್ಟಣದಿಂದ ನಿಖಿಲ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. “ನಿಖಿಲ್ ಅವರ ಕಡೆ ಸಹಾನುಭೂತಿಯ ಅಂಶವಿದೆ ಎಂದು ಅಶೋಕ್ ತಿಳಿಸಿದರು.