ಬೆಂಗಳೂರು: ಇತ್ತಿಚಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಸಿ. ಪಿ. ಯೋಗೇಶ್ವರ್ ಹರಕೆಯ ಕುರಿಯಾಗಲಿದ್ದು, ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಜೆಪಿ ಹಾಗೂ ಜೆಡಿಎಸ್ ಒಮ್ಮತದಿಂದ ಘೋಷಿಸಿದ್ದೇವೆ. ಜೆಡಿಎಸ್ ಅಭ್ಯರ್ಥಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಕಾರ್ಯಕರ್ತರ ಸಭೆ ನಡೆಸಿದೆ. ಆದರೆ ಕಾಂಗ್ರೆಸ್ ತನ್ನ ಕಾರ್ಯಕರ್ತರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ಸಿ.ಪಿ. ಯೋಗೇಶ್ವರ ಅವರನ್ನು ಆಯ್ಕೆ ಮಾಡಿದೆ. ಪಕ್ಷದ ಬಂಡಾಯವನ್ನು ಪರಿಹರಿಸುತ್ತೇನೆ ಎಂದು ಡಿಸಿಎ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಈಗ ಕಾಂಗ್ರೆಸ್ ಕಾರ್ಯಕರ್ತರು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಎಸ್‌ಸಿ/ಎಸ್‌ಟಿ ಸಮುದಾಯಗಳ ಹಣ ದುರುಪಯೋಗ, ವಾಲ್ಮೀಕಿ ಬುಡಕಟ್ಟು ಅಭಿವೃದ್ಧಿ ನಿಗಮದ ಹಗರಣ ಮತ್ತು ಮುಡಾ ಹಗರಣದಿಂದಾಗಿ ಕರ್ನಾಟಕ ಸರ್ಕಾರ ಕೆಟ್ಟ ಹೆಸರು ಗಳಿಸಿದೆ. ಗಣಿಗಾರಿಕೆ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ದೂಷಿಯಾಗಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಸಿ, ಡ್ಯಾನ್ಸ್ ಮಾಡಿ, ಕಾಲು ನೋವಿಗೆ ಮಸಾಜ್ ಮಾಡಿಸಿಕೊಂಡಿದ್ದರು. ಇದೀಗ ಅವರದೇ ಪಕ್ಷದ ಶಾಸಕರೊಬ್ಬರು ಗಣಿ ಲೂಟಿ ಮಾಡಿ ಸಿಕ್ಕಿಬಿದ್ದಿದ್ದಾರೆ. ಗಣಿ ಲೂಟಿಗೆ ಕಾಂಗ್ರೆಸ್ ಕಾರಣ ಎಂಬುದು ಜನರಿಗೆ ಗೊತ್ತಿದೆ ಎಂದು ಲೇವಡಿ ಮಾಡಿದರು.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ಜನರಿಗೆ ಸಹಾನುಭೂತಿ ಇದೆ. ಸಿ.ಪಿ. ಯೋಗೇಶ್ವರ್‌ಗೆ ಟಿಕೆಟ್ ಒದಗಿಸಲು ನಾವೆಲ್ಲಾ ಪ್ರಯತ್ನಿಸಿದರೂ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಒಂದು ಕಾಲದಲ್ಲಿ ಬಿಜೆಪಿಯ ಹಿರಿಯ ನಾಯಕರಾಗಿದ್ದ ಅವರು ಈಗ ಕಾಂಗ್ರೆಸ್‌ನಲ್ಲಿ ಮೂರನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ಕಾಂಗ್ರೆಸ್ ನಾಯಕರು ಅವರನ್ನು ಹರಕೆಯ ಕುರಿ ಮಾಡಿದ್ದಾರೆ. ಜನರಿಗೆ ಉತ್ತಮ ನಾಯಕತ್ವ ಬೇಕು, ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಶ್ರಮವಹಿಸಿ ಕೆಲಸ ಮಾಡಲು ಬದ್ಧರಾಗಿದ್ದಾರೆ ಎಂದರು.
16 ತಿಂಗಳಿಂದ ಚನ್ನಪಟ್ಟಣದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒಂದು ರೂ. ಕೂಡ ನೀಡಿಲ್ಲ, ಸಂಬಳ ಕೊಡಲಾಗದಷ್ಟು ಬಡವಾಗಿದೆ.ಮಳೆಯಿಂದ ಬೆಳೆ ಹಾನಿಯಾಗಿದ್ದರೂ ರೈತರಿಗೆ ಪರಿಹಾರ ನೀಡಲು ಹಣದ ಕೊರತೆ ಇದೆ. ರಾಜಧಾನಿ ಬೆಂಗಳೂರು ಜಲಾವೃತಗೊಂಡಿದ್ದರೂ ಸರ್ಕಾರಕ್ಕೆ ಅರಿವಿಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದರು.