ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಸ್ಪರ್ಧೆ ವಿಚಾರದಲ್ಲಿ ಅಂತಿಮ ಹಂತದವರೆಗೂ ಹಲವು ಬೆಳವಣಿಗೆಗಳು ನಡೆದು ಕೊನೆಗೆ ಅನಿವಾರ್ಯವಾಗಿ ನಿಖಿಲ್ ನ್ನು ಚುನಾವಣೆಗೆ ನಿಲ್ಲಿಸುವ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕರೇ ದೂಡಿದರು ಎಂದು ಕೇಂದ್ರ ಸಚಿವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಿಖಿಲ್ ನಿಲ್ಲುವ ಆಸೆಯಲ್ಲಿರಲಿಲ್ಲ, ದೇವರ ಇಚ್ಛೆ, ಅವನೇ ಚುನಾವಣೆಗೆ ನಿಲ್ಲುವ ಅನಿವಾರ್ಯತೆಯನ್ನು ಕಾಂಗ್ರೆಸ್ ನಾಯಕರು ಸೃಷ್ಟಿಸಿದರು ಎಂದರು.
ನಿಖಿಲ್ ಸ್ಪರ್ಧೆ ಬಗ್ಗೆ ಮೊನ್ನೆ ರಾತ್ರಿಯೇ ನಿರ್ಧಾರವಾಗಿದ್ದು, ಒಂದು ರಾತ್ರಿಯಲ್ಲಿ ಕಾರ್ಯಕರ್ತರು ಹಳ್ಳಿಹಳ್ಳಿಗೆ ಭೇಟಿ ನೀಡಿದ್ದರು. ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ನಮ್ಮ ಪಕ್ಷ ಮತ್ತು ಬಿಜೆಪಿಯ ಎಲ್ಲಾ ಹಿರಿಯ ಮುಖಂಡರು ಹಳ್ಳಿ ಮತ್ತು ನಗರ ಪ್ರದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು, ಕಾರ್ಯಕರ್ತರು ಸೇರಿರುವುದನ್ನು ನೋಡಿದರೆ ನಿಖಿಲ್ ಗೆ ಇರುವ ಜನಬೆಂಬಲ ನೋಡಬಹುದು ಎಂದರು.
ಕಾಂಗ್ರೆಸ್ ನವರು ಹಣಬಲ ಮತ್ತು ಅಧಿಕಾರದಿಂದ ಈಗಲೇ ತಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಬೀಗುತ್ತಿದ್ದಾರೆ. ಆ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲದೆ ಸಿ ಪಿ ಯೋಗೇಶ್ವರ್ ಅವರನ್ನು ಹೈಜಾಕ್ ಮಾಡಿಕೊಂಡು ಹೋಗಿದ್ದಾರೆ. ಇದನ್ನೆಲ್ಲ ಕ್ಷೇತ್ರದ ಜನತೆ ನೋಡಿದ್ದಾರೆ. ಈಗ ಮತ್ತೆ ಕುತಂತ್ರ ಮಾಡುತ್ತಿದ್ದಾರೆ. ನಾನು ಯಾರ ಬಗ್ಗೆ ಟೀಕೆ ಮಾಡುವುದಿಲ್ಲ. ನಾನು ಚನ್ನಪಟ್ಟಣದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಂದ ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದರು.