ರಾಮನಗರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸೈಟು ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ಹೆಚ್ಚಿದ್ದು, ಶೀಘ್ರದಲ್ಲೇ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಿದಾಡಿದ್ದವು. ಅಲ್ಲದೇ ಕಾಂಗ್ರೆಸ್ನಲ್ಲೇ ಮುಂದಿನ ಸಿಎಂ ಬಗ್ಗೆ ರಾಜಕೀಯ ಬೆಳವಣಿಗೆಗಳು ಜೋರಾಗಿದ್ದವು. ಮುಂದಿನ ಸಿಎಂ ತಾವೇ ಎಂದು ಹಿರಿಯ ಕಾಂಗ್ರೆಸ್ ಶಾಸಕರು ಬಹಿರಂಗ ಹೇಳಿಕೆ ನೀಡಲು ಶುರು ಮಾಡಿದ್ದರು. ಆದರೆ ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು.
ಇದೀಗ ಉಪ ಚುನಾವಣೆ ಸಮರದಲ್ಲಿ ಸಿಎಂ ವಿಚಾರ ಸದ್ದು ಮಾಡಲಾರಂಭಿಸಿದೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಉಪ ಚುನಾವಣೆ ಇದು ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಅವರು ಭಾನುವಾರ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದ್ದಾರೆ.
ಇಂದು ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವಲಿಂಗೇಗೌಡ ಅವರು, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ಉಪ ಚುನಾವಣೆ ಇದು. ಉಪಚುನಾವಣೆ ಫಲಿತಾಂಶ ಡಿ.ಕೆ.ಶಿವಕುಮಾರ್ ನಾಯಕತ್ವವನ್ನು ತೋರಿಸುತ್ತೆ. ನೀವು ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟುಕೊಡಬಾರದು. ರಾಜ್ಯದ ರಾಜಕಾರಣದ ತಿರುವು ಚನ್ನಪಟ್ಟಣ ಕ್ಷೇತ್ರದಿಂದ ಶುರುವಾಗುತ್ತೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರಿಗೆ ಡಿ.ಕೆ.ಸುರೇಶ್ರನ್ನ ನಿಲ್ಲಿಸಿ ಗೆಲ್ಲಿಸಿ ಕೊಡೋದಕ್ಕೆ ಆಗುತ್ತಿರಲಿಲ್ವಾ? ಆದರೆ ಯೋಗೇಶ್ವರ್ ಒಳ್ಳೆ ಕೆಲಸ ಮಾಡಿದ್ದಾರೆ ಎಂದು ತ್ಯಾಗ ಮಾಡಿದ್ದಾರೆ. ರಾಜಕೀಯ ಜೀವನ ಉಳಿಸಿಕೊಳ್ಳಲು ಕುಮಾರಸ್ವಾಮಿ ಬಿಜೆಪಿಗೆ ಹೋದ್ರು. ಇಲ್ಲದಿದ್ರೆ ಎಚ್ಡಿಕೆ ರಾಜಕಾರಣ ಮುಗಿದೇ ಹೋಗ್ತಿತ್ತು. ಕುಮಾರಸ್ವಾಮಿ ತಮ್ಮ ಕುಟುಂಬ ಅಷ್ಟೇ ಬದುಕಿದ್ರೆ ಸಾಕು ಅನ್ನೋ ಥರದಲ್ಲಿದ್ದಾರೆ ಎಂದು ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.