ಬೆಳಗಾವಿ: ರಾಜ್ಯ ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದ್ದು, ಬಿಜೆಪಿಯ ಎಂಟು ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಯಶವಂತಪುರ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ನೀಡಿರುವ ಹೇಳಿಕೆ ನಿಜ ಎಂದು ಅಥಣಿ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮನೆಯೊಂದು 6 ಬಾಗಿಲು ಎನ್ನುವಂತಾಗಿದೆ. ಲೀಡರ್ ಲೆಸ್ ಪಾರ್ಟಿಯಾಗಿದೆ. ಸಣ್ಣಪುಟ್ಟ ವೈಮನಸ್ಸು ಸರಿಪಡಿಸುವ ಸಾಮರ್ಥ್ಯ ಕೂಡ ಯಾರಿಗೂ ಇಲ್ಲದಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ನಶಿಸಿ ಹೋಗುವುದು ಕಾಣಿಸುತ್ತಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿಯ 8 ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿರುವ ಮಾತು ನಿಜ. ಸೋಮಶೇಖರ್, ಶಿವರಾಮ್ ಹೆಬ್ಬಾರ್ ಆಲ್ ಮೋಸ್ಟ್ ಕಾಂಗ್ರೆಸ್ ಗೆ ಬಂದಾಗಿದೆ. ಶೀಘ್ರದಲ್ಲಿಯೇ ಇನ್ನಷ್ಟು ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ಹೇಳಿದರು.
ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ಸೇರಿದಂತೆ ಆ ಭಾಗಗಳಲ್ಲಿ ಬಿಜೆಪಿಯನ್ನು ಬೆಳೆಸಿದವರು. ಯೋಗೇಶ್ವರ್ ಗೆ ಟಿಕೆಟ್ ಕೊಡದಿದ್ದಕ್ಕೆ ಅವರು ಪಕ್ಷದಿಂದ ಹೊರಬಂದಿದ್ದಾರೆ. ಪಕ್ಷದ ಮೂಲ ಮುಖಂಡರ ಸಾಧಕ-ಬಾಧಕ ನೋಡಬೇಕು. ಏಕಾಏಕಿ ಯಾರೋ ಒಬ್ಬರನ್ನು ಚುನಾವಣೆಗೆ ನಿಲ್ಲಿಸಿಬಿಟ್ಟರೆ ಹಳಬರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ಬಿಜೆಪಿಯ ಬಹುತೇಕ ನಾಯಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆಂತರಿಕ ಬಿಕ್ಕಟ್ಟು ಅವರನ್ನು ಕಾಡಲು ಶುರು ಮಾಡಿದೆ. ಹೀಗಾಗಿಯೇ ಅವಕಾಶ ವಂಚಿತ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದರು.
ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿರಿಯ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಬಿಜೆಪಿ ಹೀನಾಯವಾಗಿ ನಡೆಸಿಕೊಂಡಿದೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಪವಾರ್ ಕೊಡುಗೆ ಅಪಾರವಾಗಿದ್ದು, ಮುಂಬರುವ ಚುನಾವಣೆಯಲ್ಲಿ ಮಹಾರಾಷ್ಟ್ರದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.