ಹಾಸನ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗಲಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಾನು ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಳೆದ ಬಾರಿ ಜನರು ನನ್ನನ್ನು ಆರಿಸಿ ಕಳುಹಿಸಿದ್ದರು. ಈ ಬಾರಿ ಕೂಡ ನನ್ನ ಮಗನ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಉಪ ಚುನಾವಣೆ ನಂತರ ಸರ್ಕಾರದಲ್ಲಿ ಬದಲಾವಣೆಯಾಗಲಿದೆ. ಹಲವು ನಾಯಕರ ಭವಿಷ್ಯ ಕೂಡ ನಿರ್ಧಾರವಾಗಲಿದೆ ಎಂದರು, ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬೆ ದರ್ಶನವನ್ನು ಇಂದು ತಮ್ಮ ಕುಟುಂಬಸ್ಥರೊಂದಿಗೆ ಪಡೆದುಕೊಂಡರು. ಈ ವೇಳೆ ವಿಶೇಷ ಪೂಜೆ ಸಲ್ಲಿಸಿ ಚನ್ನಪಟ್ಟಣದಲ್ಲಿ ಪುತ್ರನಿಗೆ ಗೆಲುವಾಗಲಿ ಎಂದು ಪ್ರಾರ್ಥಿಸಿದರು.
ಈ ಚುನಾವಣೆಯಲ್ಲಿ ನಿಖಿಲ್ಗೆ ಗೆಲುವು ಸಿಗಲೆಂದು ಪ್ರಾರ್ಥನೆ ಮಾಡಿದ್ದಾನೆ. ನನ್ನ ಮಗ ಎರಡು ಚುನಾವಣೆಯಲ್ಲಿ ಪರಾಜಯಗೊಂಡಿದ್ದಾನೆ. ಈ ಚುನಾವಣೆಯಲ್ಲಿ ನಿಖಿಲ್ಗೆ ಗೆಲುವು ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.
ಈ ಬಾರಿ ಜಿಲ್ಲಾಡಳಿತ ಭಕ್ತರಿಗೆ ಸಕಲ ರೀತಿಯ ವ್ಯವಸ್ಥೆ ಮಾಡಿದೆ. ತಾಯಿಯ ಪವಾಡವನ್ನು ಚಿಕ್ಕವರಿದ್ದಾಗನಿಂದಲೂ ಗಮನಿಸಿದ್ದೇವೆ. ಎಲ್ಲಾ ಕುಟುಂಬಕ್ಕೂ ತಾಯಿಯ ಅನುಗ್ರಹ ಸಿಗಲಿ. ನಮ್ಮ ಬಾಳಿನಲ್ಲಿ ಯಶಸ್ಸು ಕಾಣಲು ಭಗವಂತನ ಆಶೀರ್ವಾದಬೇಕು. ದುರ್ಗಾಮಾತೆ, ಚಾಮುಂಡೇಶ್ವರಿ ನಮ್ಮ ಬೇಡಿಕೆ ಅನುಗ್ರಹಿಸುತ್ತಾರೆ. ಜನರಿಗೆ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.