ಬೆಂಗಳೂರು: ಮುಡಾ, ವಾಲ್ಮೀಕಿ ಹಗರಣಗಳ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಪ್ರತಿಪಕ್ಷ ಬಿಜೆಪಿಗೂ ಬಿಸಿ ಮುಟ್ಟಿಸಲು ಮುಂದಾಗಿರುವ ಕಾಂಗ್ರೆಸ್, Covid-19 ಅಕ್ರಮದ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸುವ ಶಿಫಾರಸ್ಸು ಜಾರಿಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ.
ಹೌದು.. ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ಸಮಾಲೋಚನೆಗಳು ನಡೆದಿದ್ದು, ಕೋವಿಡ್ ಅಕ್ರಮದ ತನಿಖಾ ಆಯೋಗದ ಶಿಫಾರಸ್ಸಿನಂತೆ ಕೋವಿಡ್ ಅಕ್ರಮದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವ ತೀರ್ಮಾನವನ್ನು ರಾಜ್ಯಸರ್ಕಾರ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಸಂಪುಟಸಭೆಯಲ್ಲಿ ತೀರ್ಮಾನ ಸಾಧ್ಯತೆ
ಇನ್ನು ಇದೇ ಗುರುವಾರ ಸಚಿವ ಸಂಪುಟದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೋವಿಡ್ ಅಕ್ರಮದ ಬಗ್ಗೆ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ಅವರು ಸಲ್ಲಿಸಿರುವ ಮಧ್ಯಂತರ ವರದಿಯನ್ನು ಮಂಡಿಸಿ ಆಯೋಗದ ಶಿಫಾರಸ್ಸಿನಂತೆ ಕೋವಿಡ್ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಕೋವಿಡ್ ಅಕ್ರಮದ ಬಗ್ಗೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ನೇತೃತ್ಬದ ತನಿಖಾ ಆಯೋಗ ಕೋವಿಡ್ ವೇಳೆ ವ್ಯಾಪಕ ಅಕ್ರಮ ನಡೆದಿದೆ. ಖರೀದಿಯಲ್ಲೂ ಸಾಕಷ್ಟು ಅವ್ಯವಹಾರಗಳಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಶಿಫಾರಸ್ಸು ಮಾಡಿರುವುದು ಬಿಜೆಪಿ ನಾಯಕರಿಗೂ ಪ್ರಾಸಿಕ್ಯೂಷನ್ ಭೀತಿ ಸೃಷ್ಟಿಸಿದೆ.
ಬಿಜೆಪಿ ನಾಯಕರಿಗೂ ಸಂಕಷ್ಟ
ರಾಜ್ಯದ ಕಾಂಗ್ರೆಸ್ ಸರ್ಕಾರ ಈ ರೀತಿಯ ತೀರ್ಮಾನ ಮಾಡಿದರೆ ಬಿಜೆಪಿ ನಾಯಕರು ಸಂಕಷ್ಟಕ್ಕೆ ಸಿಲುಕಿಲಿದ್ದು, ಕೋವಿಡ್ ಅಕ್ರಮ ಬಿಜೆಪಿಗರಿಗೆ ಉರುಳಾಗುವ ಸಾಧ್ಯತೆಗಳು ಹೆಚ್ಚಿವೆ. ಸರ್ಕಾರದ ನಿರ್ಧಾರದಿಂದ ಸದ್ಯ ಬಿಜೆಪಿ ನಡೆಸಿರುವ ಹೋರಾಟಗಳಿಗೂ ಹಿನ್ನಡೆಯಾಗುವ ಸಾಧ್ಯತೆಗಳಿದ್ದು, ಕೋವಿಡ್ ಅಕ್ರಮ ಬಿಜೆಪಿಗೆ ಮುಜುಗರ ಉಂಟು ಮಾಡಿದೆ.
ಮಧ್ಯಂತರ ವರದಿ ಸಲ್ಲಿಕೆ
ಕೋವಿಡ್ ಅಕ್ರಮದ ಬಗ್ಗೆ ತನಿಖೆಗೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಈ ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ನಂತರ ವರದಿಯನ್ನು ಬಹಿರಂಗಗೊಳಿಸಿ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿಯೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆಪಾಟೀಲ್,ಎಂ.ಬಿ. ಪಾಟೀಲ್, ಪ್ರಿಯಾಂಕಖರ್ಗೆ, ಕಾನೂನು ಸಲಹೆಗಾರ ಎ.ಎಚ್. ಪೊನ್ನಣ್ಣ ಸೇರಿದಂತೆ ಹಲವರ ಜತೆ ಚರ್ಚೆ ನಡೆಸಿದ್ದಾರೆ.
ಕೋವಿಡ್ ಕಾಲದ ಅಕ್ರಮದ ಬಗ್ಗೆ ನ್ಯಾಯಮೂರ್ತಿ ಮೈಕಲ್‌ಜಾನ್ ಕುನ್ಹಾ ಅವರ ವರದಿ ಏನಿದೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.ಸಂಪುಟ ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.