ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಹುದ್ದೆ ಆಗಾಗ ಚರ್ಚೆಗೆ ಬರುತ್ತಿರುತ್ತದೆ. ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಕೆಲವು ಸದಸ್ಯರು, ಹಿರಿಯ ಶಾಸಕರು ಈ ಹಿಂದೆ ಸಾಕಷ್ಟು ಬಾರಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು.
ನಿನ್ನೆ ಮೈಸೂರಿನಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಆರ್ ವಿ ದೇಶಪಾಂಡೆ ನಾನು ಕೂಡ ಮುಖ್ಯಮಂತ್ರಿಯಾಗಬಲ್ಲೆ, ಆದರೆ ಸಿದ್ದರಾಮಯ್ಯನವರು ಮನಸ್ಸು ಮಾಡಬೇಕು, ಅವರು ಸ್ಥಾನ ಬಿಟ್ಟುಕೊಡಬೇಕಷ್ಟೆ ಎಂದಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳು ಡಿಸಿಎಂ ಡಿ ಕೆ ಶಿವಕುಮಾರ್ ಅವರಲ್ಲಿ ಕೇಳಿದಾಗ, ಸರ್ಕಾರದಲ್ಲಿ ಸಿಎಂ ಹುದ್ದೆ ಖಾಲಿ ಇದ್ದಿದ್ದರೆ ಮಾತನಾಡಬಹುದಾಗಿತ್ತು. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ದೇಶಪಾಂಡೆಯವರಿಗೆ ಸಿಎಂ ಆಗಬೇಕೆಂಬ ಆಸೆ ಇರಬಹುದು, ತಪ್ಪಲ್ಲ ಎಂದರು.
ದೇಶವಾಂಡೆ ಅವರು ಪಕ್ಷದಲ್ಲಿ ಹಿರಿಯರಿದ್ದಾರೆ. ಅವರು ಆಸೆ ಪಡುವುದು ತಪ್ಪಲ್ಲ, ಆದರೆ ಮಾಧ್ಯಮಗಳ ಮುಂದೆ ಮಾತನಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನೀಡಲಾಗುವುದು ಎಂದು ಹೇಳಿದರು.
ಮುಡಾ ಕೇಸಿನಲ್ಲಿ ಸಿದ್ದರಾಮಯ್ಯ ತಪ್ಪಿತಸ್ಥ ಎಂದು ತೀರ್ಮಾನವಾದರೆ ಹೇಗೆ ಎಂದು ಕೇಳಿದ್ದಕ್ಕೆ ಏನೂ ಆಗುವುದಿಲ್ಲ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಕೆಲಸ ಮಾಡುತ್ತಾರೆ ಎಂದರು.
ಮುಡಾ ವಿಚಾರದಲ್ಲಿ ನ್ಯಾಯಾಲಯದಲ್ಲಿ ಯಾವುದೇ ವ್ಯತಿರಿಕ್ತವಾಗುವುದಿಲ್ಲ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದು, ಅವರ ಕೆಲಸ ಮಾಡುತ್ತಾರೆ ಎಂದರು.
ಇದೇ ವೇಳೆ ಕೋವಿಡ್ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಡಾ.ಕೆ.ಸುಧಾಕರರ್ ಹೇಳಿಕೆಗೆ ಉತ್ತರಿಸಿ, ಕಾಂಗ್ರೆಸ್ ನಲ್ಲಿದ್ದು, ಈಗ ಬಿಜೆಪಿಗೆ ಹೋಗಿರುವ ಸಂಸದ ಸುಧಾಕರ್ ಅವರು ತಮ್ಮ ಹೇಳಿಕೆಯ ಬಗ್ಗೆ ಮೊದಲು ಪ್ರಮಾಣ ಪತ್ರ ನೀಡಲಿ ಎಂದು ಸವಾಲು ಹಾಕಿದರು.