ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಕ್ರವಾರ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ನಲ್ಲಿ ದಿನದಿಂದ ದಿನಕ್ಕೆ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದ್ದು, ಡಿಕೆ ಶಿವಕುಮಾರ್ ಮುಂಚೂಣಿಯಲ್ಲಿದ್ದಾರೆ ಎಂದರು.
ಸಿದ್ದರಾಮಯ್ಯ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದೆ. ಮಹತ್ವಕಾಂಕ್ಷೆಯ ಎತ್ತಿನಹೊಳೆ ಯೋಜನೆ ಉದ್ಘಾಟನೆಗೂ ಮುನ್ನಾ ಶಿವಕುಮಾರ್ ವಿಶೇಷ ಪೂಜೆ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಅವರ ಸ್ಥಾನ ಗಟ್ಟಿಯಾಗಿಲ್ಲ ಎಂಬುದರ ಸಂಕೇತವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ, ಇತರ ಸಚಿವರ ಪರಿಸ್ಥಿತಿ ಸಹಜವಾಗಿಯೇ ಬಿಜೆಪಿಗೆ ಅರ್ಥವಾಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಂದರ್ಭ ಬಂದಿದ್ದು, ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರದ ಬೆದರಿಕೆ, ಪಿತೂರಿಯ ತಂತ್ರಗಳಿಗೆ ಬಿಜೆಪಿ ಭಯಪಡುವುದಿಲ್ಲ. ಎಲ್ಲಾ ಸುಳ್ಳಿನ ಆರೋಪಗಳಿಗೆ ಉತ್ತರಿಸಲು ನಮ್ಮ ಪಕ್ಷ ಸಿದ್ಧವಿದೆ ಎಂದರು. ಮುಡಾ ಹಗರಣ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರದಂತಹ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ.
ಇನ್ನೂ ಎತ್ತಿನಹೊಳೆ ಯೋಜನೆ ಕುರಿತು ಮಾತನಾಡಿದ ವಿಜಯೇಂದ್ರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತಿತರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಆರಂಭದಲ್ಲಿ ರೂ. 8,500 ಕೋಟಿ ಅಂದಾಜು ವೆಚ್ಚ ನಿಗದಿಮಾಡಲಾಗಿತ್ತು. ಆದರೆ, ಈಗ ಅದು ರೂ. 20,000 ದಿಂದ 22,5000 ಕೋಟಿಗೆ ತಲುಪಿದೆ. ಈ ಯೋಜನೆಗೆ ಚಾಲನೆ ನೀಡಿದ್ದು ಸಂತೋಷ; ಆದರೆ, ಅದರ ಮೂಲ ಉದ್ದೇಶ ಈಡೇರಲಿದೆಯೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ ಎಂದು ತಿಳಿಸಿದರು.